ನ್ಯೂಸ್

ಸಿದ್ದೇಶ್ವರ ಶ್ರೀಗಳ ಹೆಲ್ತ್‌ಬುಲೆಟಿನ್- ಸಂಜೆಯ ವೇಳೆಗೆ ಅಸ್ವಸ್ಥತೆ ಕಂಡು ಬಂದಿದ್ದರಿಂದ ಆಕ್ಸಿಜನ್ ಪ್ರಮಾಣ ಹೆಚ್ಚಿಸಿದ್ದೇವೆ ಎಂದ ವೈದ್ಯರು

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸಂಜೆ ವೇಳೆಗೆ ಸಾಕಷ್ಟು ಅಸ್ವಸ್ಥತೆ ಕಂಡು ಬಂದಿದೆ ಎಂದು ವೈದ್ಯ ಡಾ.ಎಸ್.ಬಿ. ಪಾಟೀಲ ಮಾಹಿತಿ ನೀಡಿದ್ದಾರೆ.

ಇಂದು ಸಂಜೆ (ಜ.2) ಆರು ಗಂಟೆಗೆ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​ನಲ್ಲಿ ಸಂಜೆ ವೇಳೆಗೆ ಪೂಜ್ಯರ ಆರೋಗ್ಯದಲ್ಲಿ ರಕ್ತದೊತ್ತಡ ಕಡಿಮೆಯಾಗಿದ್ದು, ಅಸ್ವಸ್ಥತೆ ಕಂಡು ಬಂದಿದೆ. ಹೀಗಾಗಿ ಆಕ್ಸಿಜನ್ ಪ್ರಮಾಣ ಹೆಚ್ಚಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಸ್ವಾಮೀಜಿ ಆಹಾರ ನಿರಾಕರಿಸಿದ್ದು, ಆರೋಗ್ಯ ಸ್ಥಿರವಾಗಿದೆ. ಸ್ಪಷ್ಟವಾಗಿ ಮಾತನಾಡುತ್ತಿದ್ದು, ಬೇರೆಡೆ ಚಿಕಿತ್ಸೆ ನೀಡಲು ಒಪ್ಪಿಲ್ಲ. ಹೀಗಾಗಿ ಆಶ್ರಮದಲ್ಲಿಯೇ ಎಲ್ಲಾ ಮಾದರಿಯ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯವಿರುವ ಎಲ್ಲಾ ಚಿಕಿತ್ಸಾ ಪರಿಕರಗಳನ್ನು ಆಶ್ರಮಕ್ಕೆ ತರಿಸಿಕೊಳ್ಳಲಾಗಿದೆ ಎಂದು ವೈದ್ಯ ಡಾ.ಎಸ್.ಬಿ. ಪಾಟೀಲ ಸ್ಪಷ್ಟ ಪಡಿಸಿದರು.

ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಶ್ರಮದ ಕಡೆಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀಗಳನ್ನು ಕಾಣಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಶ್ರೀಗಳು ಬೇಗನೆ ಚೇತರಿಕೆ ಕಾಣಲಿ ಎಂದು ರಾಜ್ಯದ ವಿವಿಧೆಡೆ ಭಕ್ತರು ಪ್ರಾರ್ಥಿಸುತ್ತಿದ್ದಾರೆ.

ಸದ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಸಿದ್ಧೇಶ್ವರ ಶ್ರೀಗಳ ಕೊಠಡಿ ಬಳಿ ಬಂದು ಕುಳಿತಿದ್ದಾರೆ. ಸಾಕಷ್ಟು ಮನವಿ ಮಾಡಿದರೂ ಸ್ಥಳದಿಂದ ಎದ್ದು ಹೋಗಲು ಭಕ್ತರ ನಿರಾಕರಿಸುತ್ತಿದ್ದಾರೆ. ಶ್ರೀಗಳ ದರ್ಶನ ಪಡೆದೇ ಹೊಗುತ್ತೇವೆ ಎಂದು ಭಕ್ತರು ಹಠ ಹಿಡಿದು ಕುಳಿತಿದ್ದಾರೆ. ಕೊಠಡಿ ಬಳಿ ಕೂತಿರುವ ಭಕ್ತರನ್ನು ಹೊರಹಾಕಲು ಪೊಲೀಸರ ಹರಸಾಹಸ ಪಡುತ್ತಿರುವಂತಹ ಘಟನೆ ನಡೆದಿದೆ. ಕೊನೆಗೆ ಸ್ವಾಮೀಜಿಗಳ ಮಾತಿಗೆ ಎದ್ದು ಭಕ್ತರು ಹೊರನಡೆದಿದ್ದಾರೆ.