ನ್ಯೂಸ್

ಮೆಂತೆ ಸೊಪ್ಪಿನಲ್ಲಿದೆ ಮಧುಮೇಹ, ಕ್ಯಾನ್ಸರ್ ನಿರೋಧಕ ಗುಣ

ಆರೋಗ್ಯಕರ ಸೊಪ್ಪುಗಳಲ್ಲಿ ಒಂದಾದ ಮತ್ತು ಅತಿ ಕಡಿಮೆ ರಾಸಾಯನಿಕಗಳನ್ನು ಬಳಸಿ ಬೆಳೆಯುವ ಮೆಂತೆ ಸೊಪ್ಪಿನ ಗುಣ ಮತ್ತು ಪ್ರಯೋಜನಗಳು ಅಪಾರ. ಆ ಕುರಿತು ಒಂದಿಷ್ಟು ವಿಶೇಷ ಮಾಹಿತಿಗಳು ಇಲ್ಲಿವೆ.

ಮೆಂತೆ ಸೊಪ್ಪಿಗೆ ದೊಡ್ಡ ಪ್ರಮಾಣದಲ್ಲಿ ಔಷಧೀಯ ಗುಣಗಳು ಇವೆ. ಅದರಲ್ಲಿಯೂ ವಿಶೇಷವಾಗಿ ಮಧುಮೇಹ ಮತ್ತು ಕ್ಯಾನ್ಸರ್ ನಿರೋಧಕ ಗುಣಗಳು ತುಂಬಾ ಹೆಚ್ಚಿವೆ. ಇದರ ಸೇವನೆಯು ಜೀರ್ಣಶಕ್ತಿ, ಚರ್ಮ, ಹೃದಯದ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಮೆಂತೆ ಸೊಪ್ಪಿನ ನಿಯಮಿತ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ಬ್ಲಾಕ್​ಗಳು ಉಂಟಾಗುವುದು ತಪ್ಪುತ್ತದೆ. ಜೊತೆಗೆ ಮೆಂತೆಸೊಪ್ಪು ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಮೆಂತೆ ಸೊಪ್ಪಿನಲ್ಲಿ ನಾರಿನ ಅಂಶ ಹೆಚ್ಚಿರುವ ಕಾರಣ ಇದು ಬೊಜ್ಜನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. ಮತ್ತೆ ಮತ್ತೆ ತಿನ್ನಬೇಕೆಂಬ ಆಸೆಯನ್ನು ಕಡಿಮೆ ಮಾಡಲು ಮೆಂತೆ ಸೊಪ್ಪು ಸಹಾಯಮಾಡುತ್ತದೆ.

ಏನೇನಿದೆ?: ಮೆಂತೆ ಸೊಪ್ಪಿನಲ್ಲಿ ವಿಟಮಿನ್ ಸಿ ಇದೆ. ಅಲ್ಲದೆ ವಿಟಮಿನ್ ಎ ಮತ್ತು ಬೀಟಾ ಕೆರೂಟೀನ್​ನಂತಹ ಆಂಟಿ ಆಕ್ಸಿಡೆಂಟ್​ಗಳು ಹೇರಳವಾಗಿವೆ. ಇದರಿಂದಾಗಿ ನಮ್ಮ ಜೀವಕೋಶಗಳಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹಾಗಾಗಿ ಉರಿಯೂತಗಳು, ಸೋಂಕು, ಕ್ಯಾನ್ಸರ್ ನಂತಹ ತೊಂದರೆಗಳು ಸುಲಭವಾಗಿ ಬರುವುದು ತಪ್ಪುತ್ತದೆ. ಮೆಂತೆ ಸೊಪ್ಪು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಕ್ಕೆ ಉತ್ತಮ ಆಹಾರವೆಂದು ನಂಬಲಾಗಿದೆ. ಇದರಿಂದಾಗಿ ಐಬಿಎಸ್, ಮಲಬದ್ಧತೆ ಮುಂತಾದ ಸಮಸ್ಯೆಗಳು ತಪ್ಪುತ್ತವೆ. ಮೆಂತೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಂ, ತಾಮ್ರ, ಕಬ್ಬಿಣ, ಮ್ಯಾಗ್ನೆಸಿಯಂ ಮತ್ತು ಝಿಂಕ್ ನಂತಹ ಅತ್ಯುಪಯುಕ್ತ ಪೋಷಕಾಂಶಗಳು ಇರುವ ಕಾರಣದಿಂದ ಒಂದು ಮಟ್ಟಿಗೆ ಇದು ಟಾನಿಕ್​ನಂತೆಯೇ ಕೆಲಸ ಮಾಡುತ್ತದೆ. ಈ ಕಾರಣಕ್ಕಾಗಿಯಾದರೂ ಆಗಾಗ ಮೆಂತೆ ಸೊಪ್ಪನ್ನು ಬಳಸುವ ರೂಢಿ ಇಟ್ಟುಕೊಳ್ಳಬೇಕು.

ಮೆಂತೆ ಸೊಪ್ಪಿನ ಸೇವನೆಯು ರಕ್ತದಲ್ಲಿ ಪ್ಲೇಟ್ಲೆಟ್ ಕಣಗಳು ಅನವಶ್ಯಕವಾಗಿ ರಕ್ತವನ್ನು ಹೆಪ್ಪುಗಟ್ಟಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮಿದುಳು ಮತ್ತು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ. ಮೆಂತೆ ಸೊಪ್ಪು ಚರ್ಮದ ಮೇಲಿನ ಕಲೆಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ. ಅದರಲ್ಲಿಯೂ ವಿಶೇಷವಾಗಿ ಮುಖದ ಮೇಲೆ ಇರುವ ಬೇಡದ ಕಲೆಗಳು ಕಡಿಮೆಯಾಗುತ್ತವೆ. ಇದಕ್ಕಾಗಿ ಕೇವಲ ಮೆಂತೆ ಸೊಪ್ಪನ್ನು ಸೇವಿಸುವುದೊಂದೇ ಅಲ್ಲ; ಅದರ ಪೇಸ್ಟ್ ತಯಾರಿಸಿ ಅದನ್ನು ಫೇಸ್​ಪ್ಯಾಕ್ ರೀತಿಯಲ್ಲಿ ಕೂಡ ಬಳಸಬಹುದು. ಈ ಪೇಸ್ಟ್ ಅನ್ನು ವಾರದಲ್ಲಿ ಒಂದೆರಡು ದಿನ ಹೆಡ್​ಪ್ಯಾಕ್ ರೀತಿಯಲ್ಲಿ ಉಪಯೋಗಿಸುವುದರಿಂದ ಕೂದಲು ಉದುರುವುದು ನಿಯಂತ್ರಣಕ್ಕೆ ಬರುತ್ತದೆ ಮತ್ತು ತಲೆ ಹೊಟ್ಟು ಕಡಿಮೆಯಾಗಲು ಸಹಾಯವಾಗುತ್ತದೆ. ಶಾಂಪೂಗಳ ಬದಲಿಗೆ ಇದನ್ನು ಬಳಸಲು ಪ್ರಯತ್ನಿಸಬಹುದು. ಮೆಂತೆ ಸೊಪ್ಪನ್ನು ಹೊಟ್ಟೆಗೆ ಸೇವಿಸುವುದು ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆ ಯದು. ಮೂತ್ರಪಿಂಡದಲ್ಲಿ ಪದೇ ಪದೇ

ಕಲ್ಲುಗಳಾಗುತ್ತಿದ್ದರೆ ವಾರದಲ್ಲಿ ಕನಿಷ್ಠ ಒಂದೆರಡು ದಿನ ಮೆಂತೆ ಸೊಪ್ಪನ್ನು ಊಟದಲ್ಲಿ ಬಳಸಬೇಕು. ಎದೆಹಾಲುಣಿ ಸುತ್ತಿರುವ ತಾಯಂದಿರಿಗೆ ಮೆಂತೆ ಸೊಪ್ಪು ಎಲ್ಲಾ ರೀತಿಯಲ್ಲೂ ತುಂಬಾ ಒಳ್ಳೆಯ ಆಹಾರವಾಗಿದೆ. ಹಾಗಾಗಿ ಮೆಂತೆ ಸೊಪ್ಪನ್ನು ಸಾಂಬಾರ್, ಚಟ್ನಿ, ಸೂಪ್, ಪಲ್ಯಗಳಲ್ಲಿ ಬಳಸಬಹುದು. ಮೆಂತೆ ಸೊಪ್ಪಿನ ಪರೋಟ ತಯಾರಿಸಿ ಕೂಡಾ ಸೇವಿಸಬಹುದು. ಮೆಂತೆ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿಟ್ಟುಕೊಂಡು ನಿತ್ಯ ಅರ್ಧ ಚಮಚದಷ್ಟು ಪುಡಿಯನ್ನು ಕೂಡ ಸೇವಿಸಬಹುದು. ಒಟ್ಟಿನಲ್ಲಿ ಮೆಂತೆ ಸೊಪ್ಪು ನಾವಂದುಕೊಂಡದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಶ್ರೀಮಂತ ಆಹಾರ ಪದಾರ್ಥವಾಗಿದೆ.