ಕಲಬುರಗಿ: ಯುವಕನೊಬ್ಬ ತನ್ನ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡು ಅವಳನ್ನೇ ಹಾರಿಸಿಕೊಂಡು ಹೋಗಿದ್ದ ಹಿನ್ನೆಲೆಯಲ್ಲಿ ಸ್ನೇಹಿತನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕಲಬುರಗಿಯ ಹೊರವಲಯದ ಕಾಳನೂರ ಧಾಭ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.
ಕಲಬುರಗಿಯ ಫಿಲ್ಟರ್ ಬೇಡ್ ನಿವಾಸಿ ಆಕಾಶ್ ಪೂಜಾರಿ(22 ವರ್ಷ) ತನ್ನ ಸ್ನೇಹಿತ ಶ್ರೀನಿಧಿ ಎಂಬುವನ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡಿದ್ದ. ಆದರೆ ನಂತರ ಆಕೆಯನ್ನೇ ಪಟಾಯಿಸಿದ್ದ ಆಕಾಶ್, ಮನೆಯಿಂದ ಓಡಿಸಿಕೊಂಡು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಇದರಿಂದ ಕೋಪಗೊಂಡಿದ್ದ ಸ್ನೇಹಿತ ಶ್ರೀನಿಧಿ, ನಿನ್ನೆ ರಾತ್ರಿ ಆಕಾಶ್ನನ್ನು ಎಣ್ಣೆ ಹಾಕೋದಕ್ಕೆ ಕರೆದುಕೊಂಡು ಹೋಗಿ, ಧಾಭ ಬಳಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಲಬುರಗಿ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.