ನ್ಯೂಸ್

ಇನ್​ಸ್ಪೆಕ್ಟರ್ ನಂದೀಶ್ ಸತ್ತದ್ದು ಬರೀ ಹೃದಯಾಘಾತದಿಂದಲ್ಲ... ಎನ್ನುತ್ತಲೇ ಸರ್ಕಾರದ ವಿರುದ್ಧ ಸಿಡಿದೆದ್ದ ಎಚ್​ಡಿಕೆ

ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ನಂದೀಶ್ ಅವರ ಸಾವು ಬರೀ ಹೃದಯಾಘಾತದಿಂದ ಸಂಭವಿಸಿಲ್ಲ. ಇದು ಉತ್ತರ ಭಾರತದ ಅಧಿಕಾರಿಗಳ ದರ್ಪದಿಂದ ಹಾಗೂ ಸರ್ಕಾರದಿಂದಲೇ ನಡೆದ ಕಗ್ಗೊಲೆ ಎಂದು ಗಭೀರ ಆರೋಪ ಮಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಂದೀಶ್​ರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್​ಡಿಕೆ, ನಿನ್ನೆ(ಗುರುವಾರ) ನಂದೀಶ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಸಾವಿಗೆ ಬಿಜೆಪಿ ಹೈಕಮಾಂಟ್​ನ ಕೃಪಾಕಟಾಕ್ಷ ಇರುವ ಅದರಲ್ಲೂ ಉತ್ತರ ಭಾರತ ಮೂಲದ ಹಿರಿಯ ಅಧಿಕಾರಿಗಳ ಉದ್ದತಟನ, ಕಿರುಕುಳ, ಸರ್ಕಾರದ ನಡವಳಿಕೆ, ಕಾಸಿಗಾಗಿ ಹುದ್ದೆ ಕೊಡುತ್ತಿರುವುದೇ ಕಾರಣ ಎಂದು ನೇರ ಆರೋಪ ಮಾಡಿದರು.

ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತದಿಂದ ತೀರಿಕೊಂಡರು. ಹೃದಯಾಘಾತಕ್ಕೆ ಏನು ಕಾರಣ ಏನು ಅನ್ನೋದು ನನ್ನ ಪ್ರಶ್ನೆ. ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗೆ ಆಗಿದೆ ಅಂತ ಅವರ ಧರ್ಮಪತ್ನಿ ಅವರೇ ಹೇಳಿದ್ದಾರೆ. ನನಗೆ ಕೆಲಸ ಬೇಡ ನನ್ನ ಪತಿಯನ್ನು ತಂದುಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಎಚ್​ಡಿಕೆ ಆಗ್ರಹಿಸಿದರು.
ಕೆ.ಆರ್.ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ಇವರ ವ್ಯಾಪ್ತಿಯಲ್ಲಿ ಇತ್ತು. ಬೆಳಗಿನಜಾವದವರೆಗೆ ಅದು ತೆಗೆದಿತ್ತು, ಇದಕ್ಕೆ ಈ ಪೊಲೀಸ್ ಸಹಕಾರವಿತ್ತೆಂದು ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರಂತೆ. ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯುವ ಅವಕಾಶ ಕೊಟ್ಟಿದೆ. ಆ ಪಬ್ ಎಷ್ಟೊತ್ತು ತೆಗೆದಿತ್ತು? ಅಲ್ಲಿ ಯಾರಿದ್ದರು? ರಾಜಕಾರಣಿ ಬೆಂಬಲಿಗರು ಎಷ್ಟು ಜನ ಅಲ್ಲಿದ್ದರು? ಪೊಲೀಸ್ ಅಧಿಕಾರಿಗಳು ಕೂಡ ಡಾನ್ಸ್ ಮಾಡಿದ್ದಾರೆ ಅಂತ ರಿಪೋರ್ಟ್ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಎಚ್​ಡಿಕೆ ಆಗ್ರಹಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನಧಿಕೃತವಾಗಿ ಕ್ಯಾಸಿನೋ, ಮಟ್ಕಾ ದಂಧೆ ನಡೆಯುತ್ತಿದೆ. ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇನ್​ಸ್ಪೆಕ್ಟರ್ ನಂದೀಶ್​ರ ಹಿನ್ನಲೆಯನ್ನು ತಿಳಿದುಕೊಂಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ. ಸಸ್ಪೆಂಡ್ ರಿವೋಕ್​ಗಾಗಿ ಹಲವು ಮುಖಂಡರ ಮನೆಗೂ ಹೋಗಿದ್ದರಂತೆ. ಪೊಲೀಸ್ ಅಧಿಕಾರಿ ಬಳಿ 70-80 ಲಕ್ಷ ರೂ. ಕೊಟ್ಟು ಪೋಸ್ಟಿಂಗ್ ಮಾಡಿ, ನಂತರ ಹೀಗೆ ಆದಾಗ ಅವರು ಎಲ್ಲಿ ಹಣ ವಸೂಲಿ ಮಾಡಬೇಕು? ತಪ್ಪು ನಿಮ್ಮದೇ ಇಟ್ಟುಕೊಂಡರೆ ಹೇಗೆ? ಸರ್ಕಾರದ ನಡವಳಿಕೆಯಿಂದ ಆದ ಕಗ್ಗೊಲೆ ಇದು. ಇದರ ಬಗ್ಗೆ ಉನ್ನತ ತನಿಖೆಯಾಗಬೇಕು ಎಂದರು.

ನೇಮಕಾತಿ, ವರ್ಗಾವಣೆ ಹೆಸರಲ್ಲಿ ಸರ್ಕಾರ ಲಕ್ಷಾಂತರ ಹಣ ವಸೂಲಿ ಮಾಡುತ್ತಿದೆ. ಅದೇ ರೀತಿ ಒತ್ತಡ ತಂದು ನಂದೀಶ್ ಅವರಿಂದ ಹಣ ವಸೂಲಿ ಮಾಡಲಾಗಿದೆ. ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಬಿಜೆಪಿ ಹೈಕಮಾಂಡ್ ರಕ್ಷಣೆ ಇದೆ ಅಂತ ಹೀಗೆ ಮಾಡುತ್ತಿದ್ದಾರೆ ಹಿರಿಯ ಅಧಿಕಾರಿಗಳು. ಹಲವಾರು ಪ್ರಕರಣಗಳಲ್ಲಿ ಐಎಎಸ್ ಸೇರಿ ಕೆಲ ಅಧಿಕಾರಿಗಳ ಮನೆಗಳಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ. ನಂತರ ನೋಡಿದರೆ ಅಂತಹ ಅಧಿಕಾರಿಗಳು ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಇವರೇ ದಾಳಿ ಮಾಡ್ತಾರೆ. ಅಂತಹ ವ್ಯಕ್ತಿಗಳಿಗೆ ಒಳ್ಳೊಳ್ಳೆ ಪೋಸ್ಟಿಂಗ್ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು. ನಂದೀಶ್ ವಿಧಾನಪರಿಷತ್ ಸದಸ್ಯರೊಬ್ಬರ ಸಂಬಂಧಿ ಎನ್ನುವ ಮಾಹಿತಿ ಇದೆ. ಇಂತಹವರಿಗೇ ಹೀಗೆ ಆದರೆ, ಯಾವ ಹಿನ್ನೆಲೆಯೂ ಇಲ್ಲದ ಅಧಿಕಾರಿಗಳ ಪರಿಸ್ಥಿತಿ ಏನು? ಎಂದು ಕಟುವಾಗಿ ಟೀಕಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲಪ್ಪ ಹಂಡಿಬಾಗ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ಪರವಾಗಿ ಹೋರಾಟ ಮಾಡಿದ್ದು ನಾವು. ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬದ ಪರ ದನಿ ಎತ್ತಿದ್ದು ಕೂಡ ನಾವು. ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವ ಹಿರಿಯ ಅಧಿಕಾರಿಗಳಿಗೆ ಬಿಜೆಪಿ ಹೈಕಮಾಂಡ್ ಬೆಂಬಲ ಇದೆ. ಅದಕ್ಕೆ ಅವರು ದರ್ಪ ತೋರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸ್ವೇಚ್ಛಾಚಾರವಾಗಿ ದಂಧೆ ನಡೆಸಲು ಯಾಕೆ ಬಿಡಬೇಕು? ಎನ್ನುವುದು ನನ್ನ ಪ್ರಶ್ನೆ. ರಾಮನಗರ ಜಿಲ್ಲೆಯಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ನನಗೆ ಗೊತ್ತಿದೆ. ಎಲ್ಲಿ? ಹೇಗೆ? ಪೋಸ್ಟಿಂಗ್ ಕೊಡ್ತಾ ಇದ್ದಾರೆ ಅಂತಲೂ ಗೊತ್ತಿದೆ ಎಂದು ಕಿಡಿಕಾರಿದರು.

ಕೇರಳ ಜೆಡಿಎಸ್ ಅಧ್ಯಕ್ಷ ಟಿ. ಥಾಮಸ್ ಮ್ಯಾಥ್ಯೂ, ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹಾಜರಿದ್ದರು.