ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೃಹ ಕಚೇರಿ ಮುಂದೆ ಜೂ.29ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಧರಣಿ ನಡೆಸಲಿದ್ದಾರೆ.
ಈ ಬಗ್ಗೆ ಸಿಎಂಗೆ ಖುದ್ದು 7 ಪುಟಗಳ ಪತ್ರ ಬರೆದಿರುವ ದೇವೇಗೌಡ, 'ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡರು ಕೆ.ಆರ್. ಪೇಟೆಯ ಜೆಡಿಎಸ್ ಕಾರ್ಯಕರ್ತರಿಗೆ ಕಿರಿಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ನಿಮ್ಮ ಗೃಹಕಚೇರಿ ಕೃಷ್ಣಾ ಮುಂದೆ ಧರಣಿ ಕೂರುತ್ತೇನೆ' ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿರಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು, ವಿದ್ಯಾರ್ಥಿಗಳಲ್ಲಿ ಹೆಚ್ಚಿದೆ ಆತಂಕ
'ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತವಾರಿ ಸಚಿವರು ಜಿಪಂ ಜೆಡಿಎಸ್ ಸದಸ್ಯ ಎಚ್.ಟಿ. ಮಂಜುಗೆ ಕಿರುಕುಳ ನೀಡುತ್ತಿದ್ದಾರೆ. ಮಂಜುಗೆ ಸೇರಿದ ಸ್ಟೋನ್ ಕ್ರಷರ್, ಕ್ವಾರಿ ಮೈನಿಂಗ್ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಎಲ್ಲ ಇಲಾಖೆಗಳ ಅನುಮತಿ ಇದ್ದರೂ ದುರುದ್ದೇಶದಿಂದ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ನಾನೇ ನಿಮ್ಮ(ಸಿಎಂ) ಗಮನಕ್ಕೆ ತಂದಿದ್ದೆ. ಅಂದು ನಾರಾಯಣಗೌಡಗೆ ಬುದ್ಧಿವಾದ ಹೇಳುವುದಾಗಿ ತಿಳಿಸಿದ್ರಿ. ಆದರೂ ಏನೂ ಪ್ರಯೋಜನವಾಗಿಲ್ಲ' ಎಂದು ದೇವೇಗೌಡರು ಅಸಮಾಧಾನ ಹೊರ ಹಾಕಿದ್ದಾರೆ.
'ನಾರಾಯಣಗೌಡರ ಕಿರುಕುಳದ ಬಗ್ಗೆ ದೂರು ನೀಡಲು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರ ಗಮನಕ್ಕೆ ತರಲು ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಯೂ ಉದ್ದಟತನ ತೋರಿದ್ದಾರೆ' ಎಂದು ದೇವೇಗೌಡರು ಪತ್ರದಲ್ಲಿ ಆರೋಪಿಸಿದ್ದಾರೆ.
'ನನ್ನ 60 ವರ್ಷಗಳ ರಾಜಕಾರಣದಲ್ಲಿ ಇಂತಹ ಕೆಟ್ಟ ಪರಿಸ್ಥಿತಿಯನ್ನು ಕಂಡಿರಲಿಲ್ಲ. ಚುನಾವಣೆಯ ಸೇಡು ತೀರಿಸಿಕೊಳ್ಳಲು ಸಚಿವರು ಮುಂದಾಗಿದ್ದಾರೆ.
ಕಾನೂನುಬದ್ಧವಾಗಿ ಎಚ್.ಟಿ.ಮಂಜು ಅವರಿಗೆ ವ್ಯವಹಾರ ನಡೆಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಇಲ್ಲದಿದ್ದರೆ ಜೂ.29ರಂದು ಸಿಎಂ ನಿವಾಸದ ಎದುರು ಧರಣಿ ಸತ್ಯಾಗ್ರಹ ಕೂರುತ್ತೇನೆ. ಅಂದು ಜೆಡಿಎಸ್ ಶಾಸಕರು ಮತ್ತು ಮುಖಂಡರೂ ಪಾಲ್ಗೊಳ್ಳಲಿದ್ದಾರೆ' ಎಂದು ಸಿಎಂಗೆ ಎಚ್ಚರಿಸಿದ್ದಾರೆ.