ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಇತ್ತೀಚೆಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಈ ಹಿನ್ನೆಲೆ ಅವರ ನಿವಾಸಕ್ಕೆ ರಾಜಕೀಯ ಮುಖಂಡರು, ವಿವಿಧ ಮಠಾಧೀಶರು, ಗಣ್ಯರು ಭೇಟಿ ನೀಡಿ ದೇವೇಗೌಡರ ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ದೇವೇಗೌಡರ ಪತ್ನಿ ಚೆನ್ನಮ್ಮ, ತನ್ನ ಪುತ್ರಿ ಶೈಲಜಾ ಅವರೊಂದಿಗೆ ಹಾಸನಾಂಬೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರತಿವರ್ಷ ದೇವೇಗೌಡರು ದಂಪತಿ ಸಮೇತ ನಗರದ ಅಧಿದೇವತೆ ಹಾಸನಾಂಬೆ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ದೇವೇಗೌಡರು ಆಗಮಿಸಲಿಲ್ಲ. ಇಂದು(ಗುರುವಾರ) ಮಗಳ ಜತೆ ದೇಗುಲಕ್ಕೆ ಆಗಮಿಸಿದ ಚೆನ್ನಮ್ಮ, ದೇವೇಗೌಡರ ಆರೋಗ್ಯ ಸಂಪೂರ್ಣ ಗುಣಮುಖವಾಗಲೆಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇತ್ತೀಚಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಪತ್ನಿ ಭವಾನಿ ರೇವಣ್ಣ ಹಾಸನಾಂಬೆ ದರ್ಶನ ಪಡೆದಿದ್ದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ್ದ ರೇವಣ್ಣ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ದೇವರ ಮುಂದೆ ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದರು.