ಮುಂಬೈ : ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ-ನಿರ್ದೇಶಕ-ನಿರ್ಮಾಪಕ ಶಂಕರ್ ನಾಗ್ ಅವರನ್ನು ಹಿಂದಿ ನಟಿ ನೀನಾ ಗುಪ್ತ ನೆನಪಿಸಿಕೊಂಡಿದ್ದಾರೆ. ಶಂಕರ್ನಾಗ್ ನಟಿಸಿದ್ದ ವಿಶಿಷ್ಟ ಮಾದರಿಯ ಹಿಂದಿ ಚಿತ್ರ 'ಉತ್ಸವ್'ನ ದೃಶ್ಯವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ದಿವಂಗತ ನಟ ಶಂಕರ್ನಾಗ್ ಅವರು ಕನ್ನಡ ಚಿತ್ರೋದ್ಯಮಕ್ಕಷ್ಟೇ ಮೀಸಲಾಗಿರಲಿಲ್ಲ. ದೂರದರ್ಶನದ ಜನಪ್ರಿಯ ಹಿಂದಿ ಧಾರಾವಾಹಿ 'ಮಾಲ್ಗುಡಿ ಡೇಸ್'ನ ನಿರ್ಮಾಣದಿಂದ ಹಿಡಿದು ಹಿಂದಿ ಚಿತ್ರಗಳಲ್ಲಿ ಅಭಿನಯದವರೆಗೆ, ವಿನೂತನ ಪ್ರಯತ್ನಗಳಿಗೆ ಹೆಸರಾಗಿದ್ದರು. ಅವರು ನಟಿಸಿದ್ದ ಒಂದು ವಿಶಿಷ್ಟ ಚಿತ್ರವೆಂದರೆ ಕವಿ ಶೂದ್ರಕನ ಸಂಸ್ಕೃತ ನಾಟಕ ಮೃಚ್ಛಕಟಿಕಾ ಆಧಾರಿತವಾದ ಚಿತ್ರ ಉತ್ಸವ್.
ಈ ಚಿತ್ರದಲ್ಲಿ ಶಂಕರ್ನಾಗ್ ಜೊತೆ ನೀನಾ ಗುಪ್ತ ಸಹ ನಟಿಸಿದ್ದರು. ಬಾಲಿವುಡ್ ಖ್ಯಾತ ನಟನಟಿಯರಾದ ರೇಖಾ, ಅಮ್ಜದ್ ಖಾನ್, ಅನುರಾಧಾ ಪಟೇಲ್, ಶೇಖರ್ ಸುಮನ್ ಈ ಚಿತ್ರದ ಪಾತ್ರವರ್ಗದಲ್ಲಿದ್ದರು. ಶಂಕರ್ನಾಗ್ರೊಂದಿಗೆ ತಮ್ಮ ಅಭಿನಯದ ದೃಶ್ಯವೊಂದನ್ನು ಹಂಚಿಕೊಂಡಿರುವ ನೀನಾ ಗುಪ್ತ, "ಮಿಸ್ ಯು ಸೋ ಮಚ್. ಶಂಕರ್, ನೀನು ನಮ್ಮನ್ನು ತುಂಬಾ ಬೇಗ ಬಿಟ್ಟುಹೋದೆ" ಎಂದು ಬರೆದಿದ್ದಾರೆ.
ನೀನಾ ಗುಪ್ತ ಇತ್ತೀಚೆಗೆ ಬಿಡುಗಡೆ ಮಾಡಿದ ಅವರ ನೆನಪಿನಬುತ್ತಿಯ ಹೊತ್ತಿಗೆ 'ಸಚ್ ಕಹೂ ತೋ'ನಲ್ಲಿ ಕೂಡ ಶಂಕರ್ನಾಗ್ರ ಬಗ್ಗೆ ಬರೆದಿದ್ದಾರೆ. ಅವರನ್ನು 1984 ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ ಉತ್ಸವ್ ಚಿತ್ರದ ಸೆಟ್ನಲ್ಲಿ ಭೇಟಿಯಾಗಿದ್ದು. ಇಂಟಿಮೇಟ್ ಸೀನೊಂದನ್ನು ಚಿತ್ರೀಕರಿಸಿದ್ದು. ಚಿತ್ರೀಕರಣದ ವೇಳೆ ಸ್ನೇಹಿತರಾಗಿದ್ದನ್ನು ಸ್ಮರಿಸಿದ್ದಾರೆ. (ಏಜೆನ್ಸೀಸ್)