Railway Station : ನಾವು ದಿನನಿತ್ಯದ ಜೀವನದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದೇವೆ. ಹತ್ತೀರದ ಸ್ಥಳಗಳಲ್ಲಿ ಸಂಚರಿಸಲು ಅನೇಕರು ಬೈಕ, ಕಾರು, ಆಟೋ ರೀಕ್ಷಾಗಳನ್ನು ಬಳಸಿದರು ಕೂಡ ದೂರದ ಪ್ರಯಾಣಕ್ಕೆ ಪ್ರತಿಯೊಬ್ಬರು ಸಾರ್ವಜನಿಕ ವ್ಯವಸ್ಥೆಗಳಾದ ಬಸ್ಸು, ರೈಲುಗಳ ಮೇಲೆಯೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಅದರಲ್ಲೂ ಹೆಚ್ಚಿನ ಜನರ ಮೊದಲ ಆಯ್ಕೆ ಯಾವುದೆಂದರೆ ಅದು ರೈಲು. ಏಕೆಂದರೆ, ಇತರೆ ಸಾರಿಗೆಗಳಿಗೆ ಹೋಲಿಕೆ ಮಾಡಿದರೆ ರೈಲು ಪ್ರಯಾಣದ ವೆಚ್ಚ ತುಂಬಾ ಕಡಿಮೆ. ಅಷ್ಟೇ ಅಲ್ಲದೆ, ಹೆಚ್ಚು ಸುರಕ್ಷತೆಯೂ ಇದೆ.
ನಾವು ಪ್ರತಿನಿತ್ಯ ರೈಲು ನಿಲ್ದಾಣಗಳಿಗೆ ಭೇಟಿ ನೀಡುತ್ತಲೇ ಇರುತ್ತೇವೆ. ಆದರೆ, ಅಲ್ಲಿರುವ ಸಣ್ಣ ಸಣ್ಣ ವಿಚಾರಗಳನ್ನು ನಾವು ಗಮನಿಸುವುದೇ ಇಲ್ಲ. ಗಮನಕ್ಕೆ ಬಂದರು ಕೂಡ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ನಾವು ಮಾಡುವುದೇ ಅಲ್ಲ. ನಮ್ಮ ಭಾರತದಲ್ಲಿ ಒಟ್ಟು 7,461ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಮತ್ತು 500ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಿವೆ. ಇಂತಹ ಸ್ಥಳಗಳಲ್ಲಿ ಪ್ರಯಾಣಕ್ಕೆ ಬರುವ ಪ್ರಯಾಣಿಕರು ಮೊದಲು ನೋಡುವುದೇನೆಂದರೆ, ಅಲ್ಲಿ ಅಂಟಿಸಿರುವ ಅಥವಾ ನೇತಾಕಿರುವ ನಾನಾ ಬಗೆಯ ಬೋರ್ಡ್ ಹಾಗೂ ಸೂಚನಾ ಫಲಕಗಳನ್ನು. ಈ ಫಲಕಗಳು ಏನು ಸೂಚಿಸುತ್ತವೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.
ಆದರೆ, ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಗೂ ಮಟ್ರೋ ನಿಲ್ದಾಣಗಳಲ್ಲಿ ಹಳದಿ ಬಣ್ಣದ ಟೈಲುಗಳು ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಕಾಣುತ್ತವೆ. ಕೆಲವು ನಿರ್ದಿಷ್ಟ ಭಾಗಗಳಲ್ಲಿ ಈ ಹಳದಿ ಟೈಲ್ಸ್ ಅಳವಡಿಸಿರುವುದನ್ನು ನೀವು ನೋಡಿರಬಹುದು. ಅಷ್ಟಕ್ಕೂ ಈ ಹಳದಿ ಟೈಲ್ಸ್ ಏಕಿದೆ ಅನ್ನೋ ಪ್ರಶ್ನೆ ನಿಮ್ಮ ತಲೆಗೆ ಎಂದಾದರೂ ಬಂದಿದೆಯೇ? ಈ ಬಗ್ಗೆ ಪ್ರಶ್ನೆ ಮಾಡಿದರೆ ಬಹುತೇಕರಿಂದ ಬರುವ ಉತ್ತರ ಒಂದೇ ಆಗಿರುತ್ತದೆ. ಅದೇನೆಂದರೆ, ಗೊತ್ತಿಲ್ಲ ಅಂತ. ಕೆಲವರು ಡಿಸೈನ್ಗಾಗಿ ಹಾಕಿದ್ದಾರೆ ಎನ್ನುತ್ತಾರೆ. ಆದರೆ, ಅದು ತಪ್ಪು.
ಹಾಗಾದರೆ, ಇದರ ನಿಜವಾದ ಉದ್ದೇಶ ಏನಿರಬಹುದು? ಏನೆಂದರೆ, ಹಳದಿ ಟೈಲ್ಗಳನ್ನು ಸುರಕ್ಷತಾ ಕ್ರಮವಾಗಿ ಅಳವಡಿಸಲಾಗಿರುತ್ತದೆ. ಇದು ದೃಷ್ಟಿಹೀನತೆ ಇರುವವರಿಗೆ ಅನುಕೂಲಕರವಾಗಿದೆ. ಇವುಗಳನ್ನು ಟೆಂಜಿ ಬ್ಲಾಕ್ಸ್ ಎಂದು ಕರೆಯಲಾಗುತ್ತದೆ. ರೈಲು ನಿಲ್ದಾಣಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಹಳದಿ ಟೈಲುಗಳನ್ನು ಅಳವಡಿಸಲಾಗಿರುತ್ತದೆ.
1. ಚುಕ್ಕೆಗಳಿರುವ ಹಳದಿ ಟೈಲುಗಳು: ಇವು ಎಚ್ಚರಿಕೆಯ ಪ್ರದೇಶಗಳನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಪ್ಲಾಟ್‌ಫಾರ್ಮ್‌ನ ಅಂಚುಗಳಲ್ಲಿ, ಮೆಟ್ಟಿಲುಗಳ ಬಳಿ ಹಾಗೂ ಎಸ್ಕಲೇಟರ್ಗಳ ಹತ್ತಿರ ಇದನ್ನು ಅಳವಡಿಸಲಾಗಿರುತ್ತದೆ. ಲಾಠಿ ಬಳಸಿ ನಡೆಯುವವರು ಈ ಚುಕ್ಕೆಗಳ ಮೂಲಕ ಎಚ್ಚರಿಕೆಯಿಂದ ಇರಲು ಇದು ಸಹಾಯಕವಾಗಿದೆ.
2. ರೇಖೆಗಳಿರುವ ಹಳದಿ ಟೈಲುಗಳು: ಇವು ದೃಷ್ಟಿ ವೈಕಲ್ಯ ಅಥವ ಅಂಧರಿಗೆ ಸರಳ ದಾರಿಗೆ ಹೋಗಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಇವು ನಿರ್ಗಮನದ ದಾರಿ ಹಾಗೂ ಟಿಕೆಟ್ ಕೌಂಟರ್ಗಳತ್ತ ದಾರಿಯನ್ನು ತೋರಿಸುತ್ತವೆ.
ಹಾಗಾದರೆ ಈ ಟೈಲುಗಳು ಹಳದಿ ಬಣ್ಣದಲ್ಲೇ ಏಕೆ ಇರುತ್ತವೆ ಅಂತೀರಾ? ಏಕೆಂದರೆ, ಹಳದಿ ಬಣ್ಣವು ಅಲ್ಪ ದೃಷ್ಟಿ ಹೊಂದಿರುವವರಿಗೂ ಸುಲಭವಾಗಿ ಗೋಚರಿಸುತ್ತದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಈ ಬಣ್ಣವನ್ನು ಆಯ್ಕೆ ಮಾಡಲಾಗಿದೆ.
ಅಂದಹಾಗೆ, ರೈಲು ಪ್ರಯಾಣ ಅಂದರೆ ಕೇವಲ ಒಂದು ಸ್ಥಳದಿಂದ ಇನ್ನೂಂದು ಸ್ಥಳಕ್ಕೆ ಹೋಗುವುದು ಮಾತ್ರವಲ್ಲ. ಅದು ಸಂತೋಷದಿಂದ ಕೂಡಿದ ಒಂದು ಅದ್ಭುತ ಪಯಣ. ಕಿಟಕಿಯಿಂದ ಕಾಣುವ ಹಸಿರು ಹೋಲಗಳು, ಬೆಟ್ಟಗಳು, ನದಿಗಳು ಎಲ್ಲವೂ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ರೈಲು ಪ್ರಯಾಣ ಸುಲಭ. ಇಂತಹ ಹಲವಾರು ಸೂಚನೆಗಳ ಹಿಂದಿನ ಉದ್ದೇಶ ತಿಳಿದುಕೊಂಡರೆ ರೈಲು ಪ್ರಯಾಣ ಸುರಕ್ಷಿತ ಹಾಗೂ ಎಲ್ಲರಿಗೂ ಅನುಕೂಲಕರವಾಗಿರುತ್ತದೆ. (ಏಜೆನ್ಸೀಸ್)