ನ್ಯೂಸ್

ಮಹಾರಾಷ್ಟ್ರ ಚುನಾವಣೆಯಲ್ಲಿ 8- 10 ಸೀಟು ಕೇಳಿದ್ದೇವೆ: ರಾಮದಾಸ್ ಅಠವಳೆ

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಪಿಐ (ಎ) ಪಕ್ಷವು 8 ರಿಂದ 10 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ ಎಂದು ಬಿಜೆಪಿಯ ಹಿರಿಯ ನಾಯಕರಿಗೆ ತಿಳಿಸಲಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಮಂಗಳವಾರ ಹೇಳಿದರು.

ಆರ್‌ಪಿಐ (ಎ) ಪಕ್ಷವು, ಬಿಜೆಪಿ, ಶಿವಸೇನೆ (ಸಿಎಂ ಏಕನಾಥ್ ಶಿಂಧೆ ಬಣ), ಎನ್​ಸಿಪಿ (ಅಜಿತ್ ಪವಾರ್ ಬಣ) ಒಳಗೊಂಡ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ.

ಪಿಟಿಐ ಜೊತೆ ಮಾತನಾಡಿದ ಆರ್‌ಪಿಐ (ಎ) ಮುಖ್ಯಸ್ಥರು ಸೀಟು ಹಂಚಿಕೆಯ ಮಾತುಕತೆ ನಡೆಯುತ್ತಿದೆ. ಮಹಾರಾಷ್ಟ್ರ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಪಕ್ಷದ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಮೈತ್ರಿಯ ಪಾಲುದಾರರಾದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳ ಮೇಲೆ ವಿಶ್ವಾಸವಿದೆ. "ಆರ್‌ಪಿಐ (ಎ) ಪ್ರತ್ಯೇಕವಾದ ವೋಟ್​ಬ್ಯಾಂಕ್ ಹೊಂದಿದೆ. ದಲಿತ ಸಮುದಾಯದ ಹಲವು ಜನರು ಪಕ್ಷದೊಂದಿಗಿದ್ದಾರೆ ಎಂದರು.

ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ 103 ಶಾಸಕರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿದ್ದು, ಶಿವಸೇನೆ 40, ಎನ್‌ಸಿಪಿ 41, ಕಾಂಗ್ರೆಸ್ 40, ಶಿವಸೇನೆ (ಯುಬಿಟಿ) 15, ಎನ್‌ಸಿಪಿ (ಎಸ್‌ಪಿ) 13 ಮತ್ತು ಇತರರು 29. ಕೆಲವು ಸ್ಥಾನಗಳು ಖಾಲಿ ಇವೆ.