ಹಾಸನ: ಕರ್ಕಶ ಧ್ವನಿ ಮಾಡಿ ಬೈಕ್ ಚಾಲನೆ ಮಾಡಿದ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ನಗರ ಹೊರವಲಯದ ಗವೇನಹಳ್ಳಿ ಬಳಿ ಘಟನೆ ನಡೆದಿದೆ. ಆಟೋಚಾಲಕ ಸುಮಂತ್ (20) ಕೊಲೆಯಾದ ಯುವಕ.
ಹಾಸನ ನಗರದ 80 ಫೀಟ್ ರಸ್ತೆಯ ನಿವಾಸಿ ಸುಮಂತ್ ಗವೇನಹಳ್ಳಿ ಬಳಿ ತನ್ನ ಬೈಕ್‌ನಲ್ಲಿ ಕರ್ಕಶ ಧ್ವನಿ ಮಾಡುತ್ತಿದ್ದ. ಇದೇ ವೇಳೆ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡದಂತೆ ಗವೇನಹಳ್ಳಿ ಗ್ರಾಮದ ಯುವಕರು ಹೇಳಿದ್ದಾರೆ. ಇದೇ ವಿಚಾರವಾಗಿ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸ್ಥಳೀಯರು ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: ರೈಲ್ವೇ ನಿಲ್ದಾಣದಲ್ಲಿ ಶವ ಪತ್ತೆ ಪ್ರಕರಣ | ಮೂವರ ಬಂಧನ; ಪೊಲೀಸರಿಗೆ ಹಂತಕರ ಸುಳಿವು ನೀಡಿದ್ದು ಡ್ರಮ್ ಮೇಲಿದ್ದ ಸ್ಟಿಕ್ಕರ್
ಇಷ್ಟಕ್ಕೆ ಸುಮ್ಮನಾಗದ ಸುಮಂತ್, ಸ್ನೇಹಿತರೊಂದಿಗೆ ಲಾಂಗ್, ಚಾಕು ಹಿಡಿದು ವೀಲ್ಹಿಂಗ್ ಮಾಡಬೇಡ ಎಂದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಗವೇನಹಳ್ಳಿ ಗ್ರಾಮದ ಯುವಕರು ಚಾಕು, ಲಾಂಗ್ ಕಿತ್ತುಕೊಂಡಿದ್ದು, ಸುಮಂತ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ.
ಬಳಿಕ ಗಾಯಾಳು ಸುಮಂತ್‌ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸುಮಂತ್ ಸಾವನ್ನಪ್ಪಿದ್ದು, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.