ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಮತಗಟ್ಟೆ ಬಳಿ ಪೊಲೀಸರು ಮತ್ತು ಗ್ರಾಮದ ಕೆಲವರ ಮಧ್ಯೆ ಘರ್ಷಣೆ ಉಂಟಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ಗ್ರಾಮದ ಉರ್ದು ಶಾಲೆ ಮತಗಟ್ಟೆ ಬಳಿ ಕೆಲ ವ್ಯಕ್ತಿಗಳು ಜನರಿಗೆ ಉಪಹಾರ ಹಂಚುತ್ತಿದ್ದರು. ಸ್ಥಳಕ್ಕೆ ಧಾವಿಸಿದ ಕೊಣನೂರು ಠಾಣೆ ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಮತಗಟ್ಟೆ ಬಳಿ ಉಪಹಾರ ನೀಡದಂತೆ ವ್ಯಕ್ತಿಯೊಬ್ಬರಿಗೆ ಲಾಠಿಯಿಂದ ಹೊಡೆದಿದ್ದಾರೆ. ರೊಚ್ಚಿಗೆದ್ದು ಕೆಲವರು ಪೊಲೀಸ್ ಜೀಪ್ ಅಡ್ಡಗಟ್ಟಿ ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿ ಪೊಲೀಸರನ್ನು ತಳ್ಳಾಡಿ ನೂಕಾಡಿ ಘರ್ಷಣೆ ಉದ್ಭವಿಸಿ ಉದ್ರಿಕ್ತ ವಾತಾವರಣ ಘಟಿಸಿದೆ.
ಪೊಲೀಸ್ ಜೀಪ್ ಅಡ್ಡಗಟ್ಟಿದ ಗ್ರಾಮದ ಒಂದು ಗುಂಪು ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಗಲಾಟೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಮತಗಟ್ಟೆ ಬಳಿ ಫಲಾವ್ ಮತ್ತು ಮದ್ಯ ಹಂಚುತ್ತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸದಂತೆ ಹೇಳಿದ್ದಕ್ಕೆ ಪೊಲೀಸ್ ಜಿಪ್ ಅಡ್ಡಗಟ್ಟೆ ನನಗೆ ಹಾಗೂ ಪೊಲೀಸರ ಮೇಲೆ ಗ್ರಾಮದ ಕೆಲವರು ಮನಬಂದಂತೆ ಹಲ್ಲೆ ನಡೆಸಿ ಜೀಪ್ ಸುಟ್ಟು ಹಾಕುವುದಾಗಿ ಹೆದರಿಸಿದರು. ಘಟನೆ ಸಂಬಂಧ ಕರ್ತವ್ಯಕ್ಕೆ ಅಡ್ಡಪಡಿಸಿದ ಐವರನ್ನು ವಶಕ್ಕೆ ಪಡೆದಿದ್ದು ಇಪ್ಪತ್ತಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ದಾಖಲಿಸುವುದಾಗಿ ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ತಿಳಿಸಿದ್ದಾರೆ.