ನವದೆಹಲಿ : ಭಾರತದ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿರುವ ಪೆಗಾಸಸ್ ಪ್ರಕರಣವು, ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಪಕ್ಷ ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರು ಈ ಇಸ್ರೇಲಿ ಬೇಹುಗಾರಿಕೆ ಸಾಫ್ಟ್ವೇರ್ನ ಟಾರ್ಗೆಟ್ಗಳಾಗಿದ್ದಾರೆಂಬ ಆರೋಪದ ವಿಶೇಷ ತನಿಖೆ ಕೋರಿರುವ ರಿಟ್ ಅರ್ಜಿಯೊಂದರ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಮುಂದಿನ ವಾರ ಕೈಗೆತ್ತಿಕೊಳ್ಳಬಹುದಾಗಿದೆ.
ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿಕುಮಾರ್ ಅವರು ಒಬ್ಬ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್ಐಟಿ ರಚಿಸಿ ತನಿಖೆ ಆದೇಶಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ರೀತಿಯ ಕಣ್ಗಾವಲು ನಡೆಸಲು ವಿವಾದಿತ ಪೆಗಾಸಸ್ ಸ್ಪೈವೇರ್ಗಾಗಿ ಪರವಾನಗಿ ಪಡೆದಿದ್ದೀರಾ ಅಥವಾ ಅದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಿದ್ದೀರಾ ಎಂಬುದನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. ದೇಶದ ಸುಮಾರು 142 ಜನರ ಫೋನುಗಳನ್ನು ಈ ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ವರದಿಗಳು ಹೇಳಿದ್ದು, ಇದು ಸ್ವಾತಂತ್ರ್ಯ ಮತ್ತು ವೈಯಕ್ತಿಕ ಗೌಪ್ಯತೆಯ ಮೇಲೆ ಭಾರೀ ಪರಿಣಾಮ ಹೊಂದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಾಲ್ ಅವರು ಇಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪ್ರಕರಣವನ್ನು ವಿಚಾರಣೆಗೆ ಲಿಸ್ಟ್ ಮಾಡಬೇಕೆಂದು ಮನವಿ ಮಾಡಿದರು. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, "ಮುಂದಿನ ವಾರ ಅದನ್ನು ಲಿಸ್ಟ್ ಮಾಡೋಣ. ವರ್ಕ್ಲೋಡ್ ಮೇಲೆ ಅವಲಂಬಿಸಿದೆ" ಎಂದು ಹೇಳಿ, ಮುಂದಿನ ವಾರದಲ್ಲಿ ವಿಚಾರಣೆಗೆ ಪೋಸ್ಟ್ ಮಾಡಲು ಸೂಚನೆ ನೀಡಿದರು ಎನ್ನಲಾಗಿದೆ. (ಏಜೆನ್ಸೀಸ್)