ನ್ಯೂಸ್

ತನ್ನೊಂದಿಗೆ ಬೈಕ್​ನಲ್ಲಿ ಬರಲು ನಿರಾಕರಿಸಿದ ಮಹಿಳೆಯ ಮೇಲೆ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ ಸವಾರ!

ನವದೆಹಲಿ: ತನ್ನೊಂದಿಗೆ ಬೈಕ್​ನಲ್ಲಿ ಬರಲು ನಿರಾಕರಿಸಿದ ಮಹಿಳೆಯ ಮೇಲೆ ಬೈಕ್​ ಸವಾರನೊಬ್ಬ ಹೆಲ್ಮೆಟ್​ನಿಂದ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಕಮಲ್​ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆ ಮತ್ತು ಆರೋಪಿ ಇಬ್ಬರು ಅಕ್ಕಪಕ್ಕದ ಮನೆಯ ನಿವಾಸಿಗಳು. ಬೈಕ್​ನಲ್ಲಿ ತನ್ನೊಂದಿಗೆ ಬರಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಹೆಲ್ಮೆಟ್​ನಿಂದ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಗುರುಗ್ರಾಮದ ಎಸಿಪಿ ಮನೋಜ್​ ಕೆ. ತಿಳಿಸಿದ್ದಾರೆ.

ಘಟನೆ ಸಂಬಂಧಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೋ ಮುಂದೆ ಬೈಕ್​ ನಿಲ್ಲಿಸಿಕೊಂಡಿರುವ ಆರೋಪಿ, ಮಹಿಳೆಯ ಜತೆ ವಾಗ್ವಾದಕ್ಕೆ ಇಳಿಯುತ್ತಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾಳ್ಮೆ ಕಳೆದುಕೊಳ್ಳುವ ಆರೋಪಿ ಕಮಲ್​, ಮಹಿಳೆಯ ಮೇಲೆ ಹೆಲ್ಮೆಟ್​ನಿಂದ ದಾಳಿ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆಟೋ ಚಾಲಕ ಮಧ್ಯಪ್ರವೇಶಿಸಿದಾಗ ತನ್ನ ಹ್ಯಾಂಡ್​ ಬ್ಯಾಗ್​ನಿಂದ ಮಹಿಳೆ ಆರೋಪಿ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದ್ದಾಳೆ. ಬಳಿಕ ಅಲ್ಲಿಯೇ ಇದ್ದ ಮಹಿಳೆಯರು ಮಧ್ಯಪ್ರವೇಶಿಸಿ ಜಗಳನ್ನು ಬಿಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಆರೋಪಿ ಕಮಲ್​ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸಿಪಿ ಮನೋಜ್‌ ಕೆ. ಮಾಹಿತಿ ನೀಡಿದರು. (ಏಜೆನ್ಸೀಸ್​)