ನ್ಯೂಸ್

ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣ ಆರೋಗ್ಯ ಸಚಿವರಿಗೆ ಕರೊನಾ ಪಾಸಿಟಿವ್​

ಚಂಡೀಗಢ: ಕೋವಾಕ್ಸಿನ್​​ ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್​ ವಿಜ್ ಅವರಿಗೆ ಕೋವಿಡ್​-19 ಪಾಸಿಟಿವ್​ ವರದಿಯಾಗಿದೆ.​​ ನವೆಂಬರ್​ 20ರಂದು ವಿಜ್​ ಅವರು ಕರೊನಾ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು.

ಶನಿವಾರ ಟ್ವೀಟ್​ ಮೂಲಕ ಕೋವಿಡ್​ ಪಾಸಿಟಿವ್​ ಆಗಿರುವುದನ್ನು ವಿಜ್​ ಅವರು ಖಚಿತಪಡಿಸಿದ್ದಾರೆ. ತಮ್ಮ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಸಚಿವರು ಅಂಬಾಲದಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.

ಇದೇ ಆಸ್ಪತ್ರೆಯಲ್ಲಿ ವಿಜ್​ ಅವರು ನವೆಂಬರ್​ 20ರಂದು ಕೋವಾಕ್ಸಿನ್​ ಹೆಸರಿನ ಕೋವಿಡ್​ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು. ಇದಕ್ಕೂ ಮುನ್ನ ವಿಜ್​ ಅವರು ಸಂಭವನೀಯ ಕರೊನಾ ಲಸಿಕೆ ಕೋವಾಕ್ಸಿನ್​ನ ಮೂರನೇ ಹಂತದ ಪ್ರಯೋಗದ ಮೊದಲ ಸ್ವಯಂಸೇವಕರಾಗಲು ಮುಂದಾಗಿದ್ದರು.

​ಕರೊನಾ ವಿರುದ್ಧ ಕೋವಾಕ್ಸಿನ್​ ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ ಎಂದು ಹೇಳಲಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಭಾರತ್​ ಬಯೋಟೆಕ್​ ಕಂಪನಿಯೂ ಅಭಿವೃದ್ಧಿ ಪಡಿಸುತ್ತಿದೆ.

ಕೋವಾಕ್ಸಿನ್​ ಲಸಿಕೆಯ ಮೊದಲೆರಡು ಹಂತದ ಮಧ್ಯಂತರ ವಿಶ್ಲೇಷಣೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಮೂರನೇ ಹಂತದ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಲಸಿಕಾ ತಯಾರಕರು ಈ ಮುಂಚೆಯೇ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)