ನ್ಯೂಸ್

ಹಾರ್ವರ್ಡ್​ ವಿಶ್ವವಿದ್ಯಾಲಯ 3 ದಿನದಲ್ಲಿ 6 ಷರತ್ತುಗಳನ್ನು ಪೂರೈಸಿದ್ರೆ ವಿದೇಶಿ ವಿದ್ಯಾರ್ಥಿಗಳು ಅಲ್ಲೇ ಇರಬಹುದು! Harvard University

Harvard University : ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳ ಭವಿಷ್ಯ ಇದೀಗ ಅತಂತ್ರವಾಗಿದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಆಡಳಿತವು ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳನ್ನು ನಿಷೇಧಿಸಿದ್ದು, ಈ ಆದೇಶವನ್ನು ಹಿಂತೆಗೆದುಕೊಳ್ಳಲು 72 ಗಂಟೆಗಳ ಡೆಡ್​ಲೈನ್​ ಅನ್ನು ನೀಡಿದೆ. ಈ ಅವಧಿಯಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಮತ್ತೆ ದಾಖಲಿಸಿಕೊಳ್ಳಲು ಆರು ಕಠಿಣ ಷರತ್ತುಗಳನ್ನು ಪಾಲಿಸುವಂತೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಸೂಚಿಸಿದೆ.

ಪ್ರಸ್ತುತ ಟ್ರಂಪ್​ ಆಡಳಿತ, ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮ (SEVP) ಪ್ರಮಾಣೀಕರಣವನ್ನು ರದ್ದುಗೊಳಿಸಿದೆ. ಇದರಿಂದ ಹಾರ್ವರ್ಡ್ ಇನ್ನು ಮುಂದೆ F-1 ಅಥವಾ J-1 ವೀಸಾಗಳಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸುಮಾರು 6,800 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಇದೀಗ ಅನಿಶ್ಚಿತತೆಗೆ ದೂಡಿದೆ. ಅಂದಹಾಗೆ, ಹಾರ್ವರ್ಡ್‌ನ ದಾಖಲಾತಿಯ ಕಾಲು ಭಾಗ ವಿದೇಶಿ ವಿದ್ಯಾರ್ಥಿಗಳಿದ್ದು, ಅವರಲ್ಲಿ ಸುಮಾರು 800 ವಿದ್ಯಾರ್ಥಿಗಳು ಭಾರತದವರು.

ಸದ್ಯ ವಿದೇಶಿ ವಿದ್ಯಾರ್ಥಿಗಳ ಮುಂದೆ ಕೇವಲ ಎರಡು ಆಯ್ಕೆಗಳು ಉಳಿದಿವೆ. ಒಂದು SEVP-ಪ್ರಮಾಣೀಕೃತ ವಿಶ್ವವಿದ್ಯಾಲಯಕ್ಕೆ ದಾಖಲಾಗುವುದು ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿಯಲು ಕಾನೂನು ಸ್ಥಾನಮಾನ ಕಳೆದುಕೊಳ್ಳುವ ಕಾರಣದಿಂದಾಗಿ ಗಡೀಪಾರನ್ನು ಎದುರಿಸುವುದು. ಆದಾಗ್ಯೂ, ಟ್ರಂಪ್ ಆಡಳಿತ, ವಿಶ್ವವಿದ್ಯಾನಿಲಯವು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಿದರೆ ವಿದೇಶಿ ವಿದ್ಯಾರ್ಥಿಗಳನ್ನು ಮತ್ತೆ ದಾಖಲಿಸಿಕೊಳ್ಳಲು ವಿಶ್ವವಿದ್ಯಾನಿಲಯಕ್ಕೆ ಅವಕಾಶದ ಬಾಗಿಲನ್ನು ತೆರೆದಿದೆ.

6 ಷರತ್ತುಗಳು ಯಾವುವು?

1. ಕಳೆದ ಐದು ವರ್ಷಗಳಲ್ಲಿ ವಲಸೆರಹಿತ ವಿದ್ಯಾರ್ಥಿಯು ಕ್ಯಾಂಪಸ್ ಒಳಗೆ ಅಥವಾ ಹೊರಗೆ ನಡೆಸಿದ ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ, ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ಇರುವ ಎಲ್ಲ ದಾಖಲೆಗಳು, ಅದು ಅಧಿಕೃತವಾಗಿರಲಿ ಅಥವಾ ಅನೌಪಚಾರಿಕವಾಗಿರಲಿ, ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಆಡಿಯೋ ಅಥವಾ ವಿಡಿಯೋ ದೃಶ್ಯಾವಳಿಗಳನ್ನು ಒಳಗೊಂಡಂತೆ ಎಲ್ಲವನ್ನು ಸಲ್ಲಿಸಬೇಕು.

2. ಕಳೆದ ಐದು ವರ್ಷಗಳಲ್ಲಿ ವಲಸೆರಹಿತ ವಿದ್ಯಾರ್ಥಿಯು ಕ್ಯಾಂಪಸ್ ಒಳಗೆ ಅಥವಾ ಹೊರಗೆ ನಡೆಸಿದ ಅಪಾಯಕಾರಿ ಅಥವಾ ಹಿಂಸಾತ್ಮಕ ಚಟುವಟಿಕೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಆಡಿಯೋ ಅಥವಾ ವಿಡಿಯೋ ದೃಶ್ಯಾವಳಿಗಳನ್ನು ಒಳಗೊಂಡಂತೆ ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ಇರುವ ಎಲ್ಲಾ ದಾಖಲೆಗಳು ಸಲ್ಲಿಸಬೇಕು.

3. ಕಳೆದ ಐದು ವರ್ಷಗಳಲ್ಲಿ ವಲಸೆರಹಿತ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಅಥವಾ ಹೊರಗೆ ಇತರ ವಿದ್ಯಾರ್ಥಿಗಳು ಅಥವಾ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಬಗ್ಗೆ ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಆಡಿಯೋ ಅಥವಾ ವಿಡಿಯೋ ದೃಶ್ಯಾವಳಿಗಳನ್ನು ಒಳಗೊಂಡಂತೆ ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ಇರುವ ಎಲ್ಲಾ ದಾಖಲೆಗಳು ಸಲ್ಲಿಸಬೇಕು.

4. ಕಳೆದ ಐದು ವರ್ಷಗಳಲ್ಲಿ ದಾಖಲಾದ ವಲಸೆರಹಿತ ವಿದ್ಯಾರ್ಥಿಯು ಕ್ಯಾಂಪಸ್ ಒಳಗೆ ಅಥವಾ ಹೊರಗೆ ಇತರ ಸಹಪಾಠಿಗಳು ಅಥವಾ ವಿಶ್ವವಿದ್ಯಾಲಯದ ಸಿಬ್ಬಂದಿಯ ಹಕ್ಕುಗಳನ್ನು ಕಸಿದುಕೊಂಡಿರುವ ಬಗ್ಗೆ ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಆಡಿಯೋ ಅಥವಾ ವಿಡಿಯೋ ದೃಶ್ಯಗಳನ್ನು ಒಳಗೊಂಡಂತೆ ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ಇರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.

5. ಕಳೆದ ಐದು ವರ್ಷಗಳಲ್ಲಿ ದಾಖಲಾದ ಎಲ್ಲಾ ವಲಸೆರಹಿತ ವಿದ್ಯಾರ್ಥಿಗಳ ಯಾವುದೇ ಮತ್ತು ಎಲ್ಲಾ ಶಿಸ್ತಿನ ದಾಖಲೆಗಳನ್ನು ಸಲ್ಲಿಸಬೇಕು.

6. ಕಳೆದ ಐದು ವರ್ಷಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ವಲಸೆರಹಿತ ವಿದ್ಯಾರ್ಥಿಯನ್ನು ಒಳಗೊಂಡ ಯಾವುದೇ ಪ್ರತಿಭಟನಾ ಚಟುವಟಿಕೆಗೆ ಸಂಬಂಧಿಸಿದಂತೆ ಹಾರ್ವರ್ಡ್ ವಿಶ್ವವಿದ್ಯಾಲಯದ ವಶದಲ್ಲಿರುವ ಎಲ್ಲಾ ಆಡಿಯೋ ಅಥವಾ ವಿಡಿಯೋ ತುಣುಕನ್ನು ಸಲ್ಲಿಸಬೇಕು.

ಅಂದಹಾಗೆ, ವಿಶ್ವವಿದ್ಯಾನಿಲಯದ ದಾಖಲೆಗಳ ಪ್ರಕಾರ, ಭಾರತದಿಂದ ಪ್ರತಿ ವರ್ಷ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾರ್ವರ್ಡ್‌ನಲ್ಲಿ ವಿವಿಧ ಕೋರ್ಸ್‌ಗಳಿಗೆ ದಾಖಲಾಗುತ್ತಾರೆ. ಪ್ರಸ್ತುತ, 799 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಪದವಿಪೂರ್ವ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. ಟ್ರಂಪ್​ ಆಡಳಿತದ ಹೊಸ ನಿಯಮ ಜಾರಿಗೆ ಬಂದರೆ, ಅಮೆರಿಕದಲ್ಲಿ ಮುಂದುವರಿಯಲು ಬಯಸುವ ವಿದೇಶಿ ವಿದ್ಯಾರ್ಥಿಗಳು ಬೇರೆ ಸಂಸ್ಥೆಗೆ ವರ್ಗಾವಣೆಯಾಗಬೇಕಾಗುತ್ತದೆ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ವಿಶ್ವವಿದ್ಯಾನಿಲಯದ ವಿರುದ್ಧ ಗೃಹ ಭದ್ರತಾ ಇಲಾಖೆಯು ನಡೆಸುತ್ತಿರುವ ತನಿಖೆಯ ಭಾಗವಾಗಿ ಈ ಹೊಸ ನಿರ್ಧಾರವನ್ನು ಆಡಳಿತ ಮಂಡಳಿ ಪ್ರಕಟಿಸಿದೆ. ಈ ಸಂಬಂಧ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಪತ್ರವೊಂದನ್ನು ಕಳುಹಿಸಿದ್ದಾರೆ. ಹಿಂಸಾಚಾರ, ಯೆಹೂದಿ ವಿರೋಧಿ ಚಟುವಟಿಕೆ ಮತ್ತು ಕ್ಯಾಂಪಸ್‌ಗಳಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷದ ಸಹಯೋಗಕ್ಕೆ ಹಾರ್ವರ್ಡ್ ವಿಶ್ವವಿದ್ಯಾಲಯ ಕಾರಣವಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಪ್ರವೇಶವು ಒಂದು ಹಕ್ಕಲ್ಲ, ಅದು ಒಂದು ಸವಲತ್ತು ಮಾತ್ರ ಎಂದು ಪತ್ರದಲ್ಲಿ ಬರೆದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ತಮ್ಮ ವಿನಿಮಯ ಸಂದರ್ಶಕ ಕಾರ್ಯಕ್ರಮದ ಪ್ರಮಾಣಪತ್ರ (SEVP) ಗಳನ್ನು ಮರುಪಡೆಯಲು ಬಯಸಿದರೆ, 72 ಗಂಟೆಗಳ ಒಳಗೆ ಈ ಎಲ್ಲ ಮಾಹಿತಿಯನ್ನು ಒದಗಿಸಬೇಕು ಎಂದು ಹೇಳಿದ್ದಾರೆ.

ಟ್ರಂಪ್ ಆಡಳಿತದ ಈ ಹೊಸ ಕ್ರಮವು ವಿಶ್ವವಿದ್ಯಾನಿಲಯದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಬೇರೆ ಸ್ಥಳಗಳಿಗೆ ವರ್ಗಾಯಿಸಬಹುದು ಅಥವಾ ಅವರ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬಹುದು ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ. ಹಾರ್ವರ್ಡ್ ವಿಶ್ವವಿದ್ಯಾಲಯವು ಸಹ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ್ದು, ಟ್ರಂಪ್ ಆಡಳಿತದ ಈ ಕ್ರಮವು ವಿಶ್ವವಿದ್ಯಾನಿಲಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ಕ್ರಮವು ಕಾನೂನುಬಾಹಿರವಾಗಿದೆ ಎಂದಿದೆ. ಅಲ್ಲದೆ, ವಿಶ್ವವಿದ್ಯಾನಿಲಯವು 140ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಮತ್ತು ಪಿಎಚ್​ಡಿ ಸ್ಕಾಲರ್ಸ್​ ಸ್ವಾಗತಿಸಲು ಮತ್ತು ರಾಷ್ಟ್ರವನ್ನು ಶ್ರೀಮಂತಗೊಳಿಸಲು ಬದ್ಧವಾಗಿದೆ ಎಂದಿದೆ. (ಏಜೆನ್ಸೀಸ್​)