ನ್ಯೂಸ್

ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಗುಡುಗಿದ ಹುಬ್ಬಳ್ಳಿ ಹುಲಿ ವಿಶ್ವನಾಥ್​ ಸಜ್ಜನರ್! Harsha Sai

Harsha Sai : ತೆಲುಗು ರಾಜ್ಯದ ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಗತಿಯನ್ನು ತೆಲಂಗಾಣದ ಆರ್‌ಟಿಸಿ ಎಂಡಿ ವಿಶ್ವನಾಥ್​ ಸಜ್ಜನರ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಂದ ಅನೇಕ ಯುವಕರ ಜೀವನವನ್ನು ಹಾಳುಮಾಡಿ ಕೋಟಿಗಟ್ಟಲೆ ಸಂಪಾದಿಸಿ, ಸಾವಿರಾರು ರೂಪಾಯಿಗಳನ್ನು ಹಂಚಿಕೊಂಡು ಸಮಾಜ ಸೇವೆ ಮಾಡುವುದಾಗಿ ಹೇಳಿಕೊಳ್ಳುತ್ತಿರುವಂತಹ ಜನರನ್ನು ನೀವು ಅನುಸರಿಸುತ್ತಿದ್ದೀರಾ? ಅವರ ಸ್ವಾರ್ಥದಿಂದಾಗಿ ಬೆಟ್ಟಿಂಗ್ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದು ಭಾರತೀಯ ಆರ್ಥಿಕತೆಗೂ ಹಾನಿ ಮಾಡುತ್ತಿದೆ. ಇಂಥವರು ನಿಜವಾಗಿಯೂ ಏನು ಸಾಧಿಸಿದ್ದಾರೆ? ಯಾವುದೇ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆಯೇ? ಅವರು ಸಮಾಜದ ಕಲ್ಯಾಣಕ್ಕಾಗಿ ಯಾವುದಾದರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಯೇ? ಅಂತಹ ಸೈಬರ್ ಭಯೋತ್ಪಾದಕರನ್ನು ಅನುಸರಿಸಬೇಡಿ. ಇಂಥವರ ಖಾತೆಗಳನ್ನು ವರದಿ ಮಾಡಿ. ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಂದಾಗಿ ಯಾರಾದರೂ ಹಣ ಕಳೆದುಕೊಂಡರೆ, ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಸಜ್ಜನರ್ ಹೇಳಿದರು.

ಅಂದಹಾಗೆ ಯೂಟ್ಯೂಬರ್ ಹರ್ಷ ಸಾಯಿ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಇತ್ತ ಆರ್‌ಟಿಸಿ ಎಂಡಿ ಸಜ್ಜನರ್ ಅವರು ಕೆಲವು ದಿನಗಳಿಂದ ಬೆಟ್ಟಿಂಗ್ ಆ್ಯಪ್‌ಗಳ ವಿರುದ್ಧ ಹೋರಾಡುತ್ತಿದ್ದಾರೆ. ಬೆಟ್ಟಿಂಗ್‌ನಲ್ಲಿ ಭಾಗಿಯಾಗುವುದನ್ನು ತಪ್ಪಿಸಲು ಯುವಕರಿಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳಿಂದಾಗಿ ಅನೇಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇವುಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಆರ್‌ಟಿಸಿ ಎಂಡಿ ಸಜ್ಜನರ್ ಸಲಹೆ ನೀಡಿದ್ದಾರೆ.

ಇನ್ನು ತೆಲುಗು ರಾಜ್ಯಗಳಲ್ಲಿ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರವು ಬಿಸಿ ಬಿಸಿ ಚರ್ಚಾ ವಿಷಯವಾಗಿದೆ. ಕೆಲ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಯುವಕರನ್ನು ಗುರಿಯಾಗಿಸಿಕೊಂಡು ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಹಿರಿಯ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅವರು ಅಂಥವರಿಗೆ ಸಲಹೆ ಜತೆಗೆ ಎಚ್ಚರಿಯನ್ನು ನೀಡುತ್ತಿದ್ದಾರೆ. ಮುಗ್ಧ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ಬೆಟ್ಟಿಂಗ್ ಆ್ಯಪ್‌ಗಳತ್ತ ದೂಡುತ್ತಿರುವ ಇನ್ಫ್ಲುಯೆನ್ಸರ್​ಗಳ ವಿರುದ್ಧ ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಜ್ಜನರ್ ಸೂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಪ್ರಕರಣಗಳು ಸಹ ದಾಖಲಾಗಿವೆ. ವೈಜಾಗ್ ಪೊಲೀಸರು ಇತ್ತೀಚೆಗೆ ಸ್ಥಳೀಯ ಹುಡುಗ ನಾನಿ ಎಂಬಾತನನ್ನು ಬಂಧಿಸಿದ್ದರು. ಅಲ್ಲದೆ, ಸೂರ್ಯಪೇಟೆ ಜಿಲ್ಲೆಯ ಭಯ್ಯಾ ಸನ್ನಿ ಯಾದವ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ತೆಲಂಗಾಣ ಪೊಲೀಸರು ಬೆಟ್ಟಿಂಗ್ ಆ್ಯಪ್‌ಗಳನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ, ರಾಜ್ಯದ ಇನ್ಫ್ಲುಯೆನ್ಸರ್​ಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಬೆಟ್ಟಿಂಗ್ ಆ್ಯಪ್ ಪ್ರಚಾರದ ವಿಡಿಯೋಗಳನ್ನು ಡಿಲೀಟ್​ ಮಾಡುತ್ತಿದ್ದಾರೆ.

ಯಾರು ಈ ಸಜ್ಜನರ್​?

ಸೈಬರಾಬಾದ್‌ನ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಸಜ್ಜನರ್​ ಅವರು ಪ್ರಸ್ತುತ ಟಿಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಜ್ಜನರ ಅವರು ಸೈಬರಾಬಾದ್‌ ಆಯುಕ್ತರಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡರು. ಸೈಬರಾಬಾದ್ ಪೊಲೀಸ್ ಕಮೀಷನರೇಟ್‌ನಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು ಕೋವಿಡ್ -19 ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಹೈದರಾಬಾದ್​ನ ಪಶುವೈದ್ಯೆಯನ್ನು ಹತ್ಯೆ ಮಾಡಿದವರನ್ನು ಎನ್​ಕೌಂಟರ್​ ಮಾಡಿದ ಪ್ರಕರಣದಲ್ಲಿ ವಿಶ್ವನಾಥ್​ ಸಜ್ಜನರ್ ಭಾರಿ ಸುದ್ದಿಯಾದರು. ಅವರ​ ಸಾಹಸವನ್ನು ರಾಷ್ಟ್ರದೆಲ್ಲೆಡೆ ಜನರು ಶ್ಲಾಘಿಸಿದರು. ವಿಶ್ವನಾಥ್​ ಅವರು ಮೂಲತಃ ಕರ್ನಾಟಕದ ಹುಬ್ಬಳ್ಳಿ ಮೂಲದವರು.

ಯಾರು ಈ ಹರ್ಷ ಸಾಯಿ?

ತೆಲುಗು ರಾಜ್ಯಗಳಲ್ಲಿ ಹರ್ಷ ಸಾಯಿ ( Harsha Sai ) ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಈತ ಓರ್ವ ಖ್ಯಾತ ಯೂಟ್ಯೂಬರ್​. ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದರು. ಈ ಕಾರಣದಿಂದ ಹರ್ಷ ಸಾಯಿ ಫಾಲೋವರ್ಸ್ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹರ್ಷ ಸಾಯಿ ಕಡಿಮೆ ಸಮಯದಲ್ಲಿ ಬಹಳ ಪ್ರಸಿದ್ಧರಾದರು. ‘ಮೆಗಾ’ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗಲು ತಯಾರಿ ನಡೆಸುತ್ತಿದ್ದರು. ಇದರ ನಡುವೆಯೇ ಹರ್ಷ ಸಾಯಿ ವಿವಾದಕ್ಕೆ ಸಿಲುಕಿದರು. ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಯುವತಿಯೊಬ್ಬಳು ಹರ್ಷ ಸಾಯಿ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ಏಜೆನ್ಸೀಸ್​)