ನ್ಯೂಸ್

ಬಿಡುಗಡೆಗೆ ಸಜ್ಜಾಯ್ತು ಹರೀಶ್ ರಾಜ್ ನಟನೆಯ 'ಪ್ರೇತ'

ಬೆಂಗಳೂರು: ಕನ್ನಡ ಚಿತ್ರರಂಗದ “ಕಲಾಕಾರ್‌’ ಖ್ಯಾತಿಯ ನಟ, ನಿರ್ದೇಶಕ ಹರೀಶ್‌ ರಾಜ್‌ “ಪ್ರೇತ’ದ ಜೆತೆಗೆ ಪ್ರೇಕ್ಷಕರ ಮುಂದೆ ಹಾಜರಾಗಲು ರೆಡಿಯಾಗಿದ್ದಾರೆ. ಹರೀಶ್‌ ರಾಜ್‌ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಥ್ರಿಲ್ಲರ್‌ ಆದ ಈ ಸಿನಿಮಾದ ಬಿಡುಗಡೆ ದಿನಾಂಕ ಇದೀಗ ನಿಗದಿಯಾಗಿದೆ. ಇದೇ ತಿಂಗಳ 23ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ಹರೀಶ್‌ ರಾಜ್​ಗೆ ನಾಯಕಿಯಾಗಿ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ.ಎಂ. ವೆಂಕಟೇಶ್‌, ಅಮಿತ್‌ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹರೀಶ್‌ ರಾಜ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಪ್ರೇತ ಸಿನಿಮಾ ನಿರ್ಮಾಣಗೊಂಡಿದ್ದು, ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಮುಖೇನ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ವಿಶೇಷ.

ಕಿರಣ್ .ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಚಿತ್ರಕ್ಕಿದೆ. ಪ್ರಮೋದ್ ಮರವಂತೆ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾವನ್ನು ಶಾಲಿನಿ ಆರ್ಟ್ಸ್ ನಡಿ ಜಾಕ್ ಮಂಜು ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದ್ದಾರೆ.