ದಾಂಪತ್ಯ ಇತ್ತೀಚೆಗೆ ಅಪಥ್ಯವಾಗುತ್ತಿದೆ. ಹೊಂದಾಣಿಕೆ, ಪರಸ್ಪರ ತಿಳಿವಳಿಕೆ ಕೊರತೆ, ಪ್ರತಿಷ್ಠೆ ಹೀಗೆ ನಾನಾ ಕಾರಣಗಳಿಂದ ಪತಿ -ಪತ್ನಿ (Happy Marriage) ದೂರವಾಗುವ ಹಂತಕ್ಕೆ ಬಂದು ನಿಂತ ಮತ್ತು ದೂರವಾದ ಹಲವು ಪ್ರಕರಣಗಳು ನಮ್ಮೆದುರು ಕಂಡು ಬರುತ್ತಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪರಸ್ಪರ ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕಾದ ವಿಷಯಕ್ಕೆ ಕೋರ್ಟ್ ಮೆಟ್ಟಿಲು ಏರುವುದು ವೈಯಕ್ತಿಕವಾಗಿ ಅವರಿಗೂ ಒಳಿತಲ್ಲ ಸಮಾಜಕ್ಕೂ ಶೋಭೆಯಲ್ಲ. ಅವರು ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ. ಪ್ರೀತಿಸಿ ಮದುವೆಯಾದವರು. ನೀನೇ ನೀನೇ ನನಗೆಲ್ಲಾ ನೀನೆ ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಸಪ್ತಪದಿ ತುಳಿದ ಪ್ರಣಯ ಪಕ್ಷಿಗಳು. ನೋಡಿದವರೆಲ್ಲ ಏನು ಜೋಡಿಯಪಾ ಥೇಟ್ ರತಿ ಮನ್ಮಥರಂತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಅನ್ಯೋನ್ಯವಾಗಿದ್ದವರು. ದಾಂಪತ್ಯದ ಸವಿಜೇನು ಸವಿದ ಪ್ರತಿಫಲ ಎರಡು ಮುದ್ದಾದ ಮಕ್ಕಳನ್ನು ಪಡೆದವರು. ಈ ಮಧ್ಯೆ ಈ ಅನ್ಯೋನ್ಯತೆಗೆ ಯಾವ ಧಕ್ಕೆ ಬಂತೋ ಗೊತ್ತಿಲ್ಲ, ಇದೀಗ ಪರಸ್ಪರ ದೂರವಾಗುವ ನಿರ್ಧಾರಕ್ಕೆ ಬಂದು ನಿಂತಿದ್ದಾರೆ.
ಹೌದು, ಇದು ನೈಜ ಸಂಗತಿ. ಮೊನ್ನೆಯಷ್ಟೇ ನನ್ನ ಬಳಿ ಬಂದು ತಲೆತಗ್ಗಿಸಿ ನಿಂತ ಪ್ರತಿಷ್ಠಿತ ಮನೆತನದ ದಂಪತಿಯ ವ್ಯಥೆಯ ಕಥೆಯಿದು. ವೃತ್ತಿಯಲ್ಲಿ ಇಬ್ಬರೂ ದೊಡ್ಡ ಹುದ್ದೆಯಲ್ಲಿದ್ದವರು. ಸಂಪತ್ತು, ಸೌಲಭ್ಯಗಳಿಗೆ ಎಳ್ಳಷ್ಟೂ ಕೊರತೆಯಿಲ್ಲ. ಸಮಾಜದಲ್ಲೂ ಉತ್ತಮ ಸ್ಥಾನ ಮಾನ ಹೊಂದಿವರು. ಆದರೆ ಅದ್ಯಾವ ಗಳಿಗೆಯಲ್ಲಿ ಇವರಿಬ್ಬರ ಮನಸ್ಸಿನಲ್ಲಿ ಪ್ರತಿಷ್ಠೆ ಎಂಬ ಪಾಶ ನುಸುಳಿತೋ ಗೊತ್ತಿಲ್ಲ. ದಿನದಿಂದ ದಿನಕ್ಕೆ ದಾಂಪತ್ಯದಲ್ಲಿ ಬಿರುಕು ಬಲವಾಗುತ್ತ ಸಾಗಿತು. ಮಾತಿಗೆ ಮಾತು, ಸವಾಲಿಗೆ ಸವಾಲು ಬೆಳೆದು ಇದೀಗ ವಿಚ್ಛೇದನದ ಹಂತಕ್ಕೆ ಬಂದು ನಿಂತಿದೆ. ಇನ್ನು ಹೊಂದಾಣಿಕೆ ಆಗದು ಎಂಬ ಗಟ್ಟಿ ನಿರ್ಧಾರದೊಂದಿಗೆ ಇರಲಿ ಅಂತಾ ನನ್ನ ಬಳಿ ಬಂದಿದ್ದರು. ಇಬ್ಬರೂ ತಮ್ಮ ತಮ್ಮ ವಾದ, ಸಮರ್ಥನೆ ಮಂಡಿಸಿದರು. ಅವರವರ ವೈಯಕ್ತಿಕ ತಿಳಿವಳಿಕೆ ಮತ್ತು ಆಲೋಚನೆಗೆ ತಕ್ಕಂತೆ ಅವರದು ಸರಿ. ಆದರೆ ದಾಂಪತ್ಯದ ದೃಷ್ಟಿಯಿಂದ ಇಬ್ಬರದೂ ತಪ್ಪು. ಇಲ್ಲಿ ಯಾರೂ ಕನಿಷ್ಠರಲ್ಲ. ಯಾರೂ ಶ್ರೇಷ್ಠರಲ್ಲ. ಮನುಷ್ಯ ಎಂದ ಮೇಲೆ ಎಡವುವುದು ಸಹಜ.
ಯಾರೂ ಪರಿಪೂರ್ಣರಲ್ಲ. ಸರ್ವಜ್ಞನೂ ಅಲ್ಲ. ಇದು ಅರ್ಥವಾಗದಿದ್ದಾಗ ಸ್ವಪ್ರತಿಷ್ಠೆಯ ಪಿತ್ತ ನೆತ್ತಿಗೇರುತ್ತದೆ. ನಾನೇ ಸರಿ ನನ್ನದೇ ನಡೆಯಬೇಕು. ನಾನು ಮಾಡಿದ್ದೇ ಎಲ್ಲರೂ ಮಾಡಬೇಕು. ಯಾರೂ ಪ್ರಶ್ನಿಸುವಂತಿಲ್ಲ ಎಂಬ ಸರ್ವಾಧಿಕಾರಿ ಧೋರಣೆ ಎದುರಿನ ವ್ಯಕ್ತಿಯಲ್ಲೂ ಪ್ರತಿಷ್ಠೆ ಹುಟ್ಟು ಹಾಕುತ್ತದೆ. ಆಗ ಪರಸ್ಪರ ಪೈಪೋಟಿ ಶುರುವಾಗುತ್ತದೆ. ನಾನೇನು ಕಡಿಮೆ? ನನಗೇನು ಗೊತ್ತಿಲ್ಲವೇ? ಕೋಳಿ ಕೂಗಿದರೇನೇ ಸೂರ್ಯೋದಯವೇ? ಎಂಬೆಲ್ಲಾ ವಿತಂಡ ವಾದ ಚಾಲನೆ ಪಡೆಯುತ್ತವೆ. ಹಂತಹಂತವಾಗಿ ವಿರಾಟ ರೂಪ ಪಡೆಯುತ್ತಾ ಹೋಗಿ ಕೊನೆಗೆ ಸಾಕಿನ್ನು ಸಹವಾಸ, ಇನ್ನು ಇದರಲ್ಲಿ ಅರ್ಥವಿಲ್ಲ. ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎನ್ನುವ ದುರಂತ ಅಂತ್ಯಕ್ಕೆ ಬಂದು ನಿಲ್ಲಿಸುತ್ತದೆ. ಇವರ ವಿಚಾರದಲ್ಲೂ ಆದದ್ದೂ ಅದೇ. ನಾನವರನ್ನು ಕೂರಿಸಿಕೊಂಡು ಹೇಳಿದ್ದು ಇಷ್ಟೇ. ನೋಡಿ ಮದುವೆ ಎಂಬ ಬಂಧ ಬರೀ ಬಂಧವಲ್ಲ. ಜನುಮ ಜನುಮದ ಅನುಬಂಧ.
ಹಿರಿಯರು ಹೇಳುವಂತೆ ಅದು ನಿಶ್ಚಯವಾಗುವುದು ಸ್ವರ್ಗದಲ್ಲಿ. ಇಂತಹ ಸ್ವರ್ಗದ ಸಂತಸ ಅನುಭವಿಸುವ ಬದಲು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಸ್ವಪ್ರತಿಷ್ಠೆಯನ್ನಾಗಿಸಿಕೊಂಡು ಇಡೀ ಜೀವನವನ್ನೇ ದುರಂತಮಯವಾಗಿಸಲು ಹೊರಟ ನಿಮ್ಮ ಈ ನಿರ್ಧಾರ ತಪ್ಪು. ಇದರ ಪರಿಣಾಮ ನಿಮ್ಮ ಮಕ್ಕಳ ಮೇಲೆ ಆಗುತ್ತದೆ. ಅವರ ಭವಿಷ್ಯದ ಮೇಲೆ ಕಾಮೋಡ ಆವರಿಸುತ್ತದೆ. ದಿನಬೆಳಗಾದರೆ ನೀವು ಈ ರೀತಿ ಅವರೆದುರು ಕಚ್ಚಾಡುತ್ತಿದ್ದರೆ ಅವರ ಮನಸ್ಸು ಘಾಸಿಯಾಗುತ್ತದೆ. ಮುಂದೆ ಅವರು ಹದಿಹರೆಯದ ಹಂತಕ್ಕೆ ಬಂದಾಗ ಇದೆಲ್ಲದರ ಪ್ರಜ್ಞೆ ಬಂದು ನಿಮ್ಮ ಬಗ್ಗೆ ತಾತ್ಸಾರ ಮನೋಭಾವ ಮೂಡುತ್ತದೆ. ಹೆತ್ತವರು ಇಂಥವರಾ ಎಂಬ ಭಾವನೆ ಅವರಲ್ಲಿ ಬೇರೂರಬಾರದು. ಅದಕ್ಕೆ ಹೊಂದಾಣಿಕೆ ಮುಖ್ಯ.
ಇಬ್ಬರಲ್ಲಿ ಒಬ್ಬರು ಸ್ವಲ್ಪ ಪ್ರತಿಷ್ಠೆ ಬಿಟ್ಟು ಸೋತು ನಡೆದರೆ ಮುಂದಿನ ಗೆಲುವು ಅವರದ್ದೇ. ಇದು ಅರ್ಥವಾದಲ್ಲಿ ಜೀವನ ಸಂತಸದ ಜೋಕಾಲಿ. ಇಲ್ಲವೇ ಖಾಲಿ ಖಾಲಿ. ಇದಕ್ಕೆ ಪರಿಹಾರ Accept- Adjust - Adapt (ಸ್ವೀಕಾರ, ಹೊಂದಾಣಿಕೆ- ಹೊಂದಿಕೊಳ್ಳುವುದು) ಹೌದು ಮೂರು ಅಂಶದ ಈ ಸೂತ್ರ ಪಾಲಿಸಿದಲ್ಲಿ ಬದುಕು ಬಲು ಸುಂದರ. ವಿಚ್ಛೇದನ ಕಾಣುವುದು ಅವಸಾನ. ಇನ್ನೇನಿದ್ದರೂ ಸಮಾಧಾನ. ಇದು ಒಂದು ಜೋಡಿಯ ಅಥವಾ ಒಂದು ಪ್ರಕರಣಕ್ಕಷ್ಟೇ ಸೀಮಿತವಲ್ಲ. ಸಾರ್ವಕಾಲಿಕ ಜೀವನಸತ್ಯ.