ನ್ಯೂಸ್

ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ!

ಹಾಸನ: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ದೇವೇಗೌಡರ ಮೊಮ್ಮಗ ಅಂದ್ರೆ ಮಾಜಿ ಸಚಿವ ಎಚ್​.ಡಿ. ರೇವಣ್ಣರ ಪುತ್ರ ಡಾ.ಸೂರಜ್​ ರೇವಣ್ಣ ಎಚ್​ಡಿಸಿಸಿ ಬ್ಯಾಂಕ್​ ನಿರ್ದೇಶಕರಾಗಿ ಶನಿವಾರ ಅವಿರೋಧ ಆಯ್ಕೆಯಾದರು. ಆ ಮೂಲಕ ದೇವೇಗೌಡರ ಮತ್ತೊಂದು ಕುಡಿ ನೇರ ರಾಜಕೀಯ ಅಖಾಡಕ್ಕೆ ಇಳಿದಂತಾಗಿದೆ. ಇದನ್ನೂ ಓದಿರಿ ‘ಇದು ಹೃದಯಹೀನ ಸರ್ಕಾರ…’ ಎಂದು ರಾಜ್ಯದ ವಿರುದ್ಧ ಕಿಡಿಕಾರಿದ ಬಿಜೆಪಿ ಎಂಎಲ್​ಸಿ

ಹೊಳೆನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಡಾ.ಸೂರಜ್​ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಸುಗಮವಾಯಿತು.

ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಯಕರಾಗಿ ಗುರುತಿಸಿಕೊಂಡಿರುವ ಡಾ.ಸೂರಜ್​, ದಂಡಿಗನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಹತ್ತಿರವಾಗಿದ್ದಾರೆ.

ತಂದೆ ಎಚ್​.ಡಿ. ರೇವಣ್ಣ, ಜಿಪಂ ಸದಸ್ಯೆ ಹಾಗೂ ತಾಯಿ ಭವಾನಿ ರೇವಣ್ಣ, ಸಹೋದರ ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ಬೆನ್ನೆಲುಬಾಗಿ ನಿಂತು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಡಾ.ಸೂರಜ್​ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಇದೀಗ ಎಚ್​ಡಿಸಿಸಿ ಬ್ಯಾಂಕ್​ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದಾರೆ.