ಭೋಪಾಲ್: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣ ದೇವ ಕೃಪೆ ತೋರಿದ್ದು, ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಆದರೆ, ಕೆಲವು ಕಡೆ ಇನ್ನೂ ಮಳೆಯಾಗದ ಕಾರಣ ಜನ ದೇವರ ಮೊರೆ ಹೋಗುತ್ತಿದ್ದು, ವಿವಿಧ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.
ಮಳೆ ಬರೆಸಲು ಜನರು ನಡೆಸುವ ವಿವಿಧ ಆಚರಣೆಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವುದು ಕೂಡ ಸೇರಿದೆ. ಮಳೆಗಾಲ ಆರಂಭವಾಗಿ ಒಂದು ಹನಿ ನೀರು ಆಕಾಶದಿಂದ ಭೂಮಿಗೆ ಬೀಳದೆ ಇದ್ದಾಗ ಜನರು ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಕತ್ತೆಗಳಿಗೆ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬುದು ಜನರ ನಂಬಿಕೆಯಾಗಿದೆ. ಆದರೆ, ಇಲ್ಲೊಂದು ಜಾಗದಲ್ಲಿ ಕತ್ತೆಗಳಿಗೆ ಮೊದಲ ಮದುವೆಯಾದ ಖುಷಿಗೆ ಕತ್ತೆಗಳಿಗೆ ಗುಲಾಬ್ ಜಾಮೂನನ್ನು ತಿನ್ನಿಸಲಾಗುತ್ತೆ ಎಂದರೆ ನೀವು ನಂಬುತ್ತೀರ. ಹೌದು ವಿಚಿತ್ರ ಎನಿಸಿದರೂ ಇದು ನಿಜ.
ಮಧ್ಯಪ್ರದೇಶದ ಮಂಡ್ಸೌರ್ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆ ಆರಂಭವಾಗದ ಕಾರಣ ಜನರು ಬರಗಾಲ ಬಾರದೇ ಇರಲು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಇದಾದ ಕೆಲ ದಿನಗಳಿಗೆ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕತ್ತೆಗಳಿಗೆ ಗುಲಾಬ್ ಜಾಮೂನು ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದೊಂದು ವಿಶಿಷ್ಟ ಸಂಪ್ರದಾಯವಾಗಿದ್ದು, ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಆಶ್ಚರ್ಯಚಕಿತರಾಗಿ ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕತ್ತೆಗಳಿಗೆ ಸ್ನಾನ ಮಾಡಿಸುವ ಜನ ಬಳಿಕ ಅದಕ್ಕೆ ಹೂವಿನ ಹಾರಗಳನ್ನು ಹಾಕಿ ಪೂಜೆ ಮಾಡುತ್ತಾರೆ. ಇದಾದ ಬಳಿಕ ಅವುಗಳಿಗೆ ನೈವೇದ್ಯವಾಗಿ ಗುಲಾಬ್ ಜಾಮೂನ್ಗಳನ್ನು ತಿನ್ನಿಸುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.