ಅಹ್ಮದಾಬಾದ್: ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಮನವಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದೆ. ಈ ಮೂಲಕ ರಾಹುಲ್ಗೆ ಹಿನ್ನಡೆಯುಂಟಾಗಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಇಂದು ಬೆಳಗ್ಗೆ 11 ಗಂಟೆಗೆ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ನೀಡಿದ್ದು, ರಾಹುಲ್ ಗಾಂಧಿ ಸಂಸತ್ತಿಗೆ ಮರುಸೇರ್ಪಡೆಗೊಳ್ಳುವ ಕನಸು ಕನಸಾಗಿಯೇ ಉಳಿದಿದೆ.
ಮೋದಿ ಉಪನಾಮ ಪ್ರಕರಣ ಹಿನ್ನೆಲೆ:
2019 ರಲ್ಲಿ ಕರ್ನಾಟಕದ ಕೋಲಾರ್ನಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ರಾಹುಲ್ ಗಾಂಧಿ, ಮೋದಿ ಉಪನಾಮವನ್ನು ಬಳಸಿಕೊಂಡು ವಾಗ್ದಾಳಿ ನಡೆಸಿದ್ದರು. ಈ ಕುರಿತಂತೆ ಮಾನನಷ್ಟ ಪ್ರಕರಣ ದಾಖಲಾಗಿತ್ತು.
ಮೋದಿ ಉಪನಾಮ ಪ್ರಕರಣದಲ್ಲಿ ಸೂರತ್‌ನ ಜಿಲ್ಲಾ ನ್ಯಾಯಾಲಯವು ರಾಹುಲ್ ಗಾಂಧಿಯನ್ನು 2023ರ ಮಾರ್ಚ್ನಲ್ಲಿ ದೋಷಿ ಎಂದು ಘೋಷಿಸಿ, ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ನಂತರ ಮಾರ್ಚ್ 24ರಂದು ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.
ದೋಷಾರೋಪಣೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸೆಷನ್ಸ್ ನ್ಯಾಯಾಲಯವು ಈ ಮನವಿಯನ್ನು ಏಪ್ರಿಲ್ನಲ್ಲಿ ತಿರಸ್ಕರಿಸಿತು. ರಾಹುಲ್ ಗಾಂಧಿ ಸಂಸದ ಮತ್ತು ದೇಶದ ಎರಡನೇ ಅತಿದೊಡ್ಡ ರಾಜಕೀಯ ಪಕ್ಷದ ಮಾಜಿ ಮುಖ್ಯಸ್ಥರಾಗಿರುವುದರಿಂದ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿತ್ತು.
ಬಳಿಕ ರಾಹುಲ್, ಸೂರತ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಮೇ ತಿಂಗಳಲ್ಲಿ, ರಾಹುಲ್ ಗಾಂಧಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿ, ಬೇಸಿಗೆ ರಜೆಯ ನಂತರ ಅಂತಿಮ ಆದೇಶವನ್ನು ನೀಡಲಾಗುವುದು ಎಂದು ಹೇಳಿತ್ತು. ಇಂದು ಈ ಕುರಿತು ಮೇಲ್ಮನವಿಯ ಆದೇಶ ಹೊರಬಿದ್ದಿದೆ.(ಏಜೆನ್ಸೀಸ್)