ನ್ಯೂಸ್

ಪಂಚೆಯಲ್ಲಿ ಬಂದ ರೈತನಿಗೆ ಪ್ರವೇಶ ನಿರಾಕರಣೆ; ಸನ್ಮಾನಿಸಿ ಕ್ಷಮೆಯಾಚಿಸಿದ ಜಿಟಿ ಮಾಲ್​ ಸಿಬ್ಬಂದಿ

ಬೆಂಗಳೂರು: ಸಿನಿಮಾ ವೀಕ್ಷಿಸಲು ಪಂಚೆ ಧರಿಸಿ ಬಂದಿದ್ದರೆಂಬ ಕಾರಣಕ್ಕೆ ರೈತನನ್ನು ಒಳಬಿಡದೆ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಟಿ ಮಾಲ್​ ಸಿಬ್ಬಂದಿ ಕ್ಷಮೆಯಾಚಿಸಿದ್ದು, ಅವಮಾನ ಮಾಡಿದ್ದ ಮಾಲ್​​ನಿಂದಲೇ ರೈತನಿಗೆ ಸನ್ಮಾನ ಮಾಡಲಾಗಿದೆ. ಮಾಲ್​ ಉಸ್ತುವಾರಿ ರೈತ ಫಕೀರಪ್ಪಗೆ ಸನ್ಮಾನಿಸಿದ್ದು, ಅವಮಾನ ಮಾಡಿದ ಗಾರ್ಡ್​ನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಮಾಲ್​ ಉಸ್ತುವಾರಿ ತಿಳಿಸಿದ್ದಾರೆ.

ಹಾವೇರಿ ಮೂಲದ ನಾಗರಾಜ್​ ಎಂಬುವವರು ತಮ್ಮ ಪೋಷಕರೊಟ್ಟಿಗೆ ಸಿನಿಮಾ ವೀಕ್ಷಿಸಲೆಂದು ಜುಲೈ 16ರಂದು ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್​ ಮಾಲ್​ಗೆ ಬಂದಿದ್ದರು. ನಾಗರಾಜ್​ ಅವರ ತಂದೆ ಫಕೀರಪ್ಪ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡಿದ್ದಾರೆ. ಇದನ್ನು ನೋಡಿದ ಸಿಬ್ಬಂದಿ ಅವರನ್ನು ಮಾಲ್​ ಒಳಗೆ ಪ್ರವೇಶಿಸಲು ನಿರಾಕರಿಸಿದ್ದಾರೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದೆ ಮಾಲ್ ಸಿಬ್ಬಂದಿ ತಡೆದು ಅವಮಾನ ಮಾಡಿದ್ದಾರೆ ಎನ್ನಲಾಗಿದ್ದು, ಮಾಲ್ ಸಿಬ್ಬಂದಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ನಮ್ಮ ತಂದೆಯನ್ನು ಸಿನಿಮಾ ತೋರಿಸಲು ಕರೆದುಕೊಂಡು ಹೋಗುವಾಗ ಮಾಲ್ ಪ್ರವೇಶ ದ್ವಾರದಲ್ಲಿ ತಡೆದಿದ್ದಾರೆ. ರೈತರು ಪಂಚೆ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಸೆಕ್ಯೂರಿಟಿ ಸಿಬ್ಬಂದಿ ಮಾಲ್ ಒಳಗೆ ಪ್ರವೇಶ ಮಾಡಲು ಬಿಡಲಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚೆ ಹಾಕಿದ್ದ ರೈತನನ್ನು ಮಾಲ್ ಮುಂದೆಯೇ ಕೂರಿಸಿದ್ದರು ಎಂದು ನಾಗರಾಜ್​ ಆರೋಪಿಸಿದ್ದರು. ಈ ಸುದ್ದಿ ಹೊರಬೀಳುತ್ತಿದ್ದಂತೆ ಕನ್ನಡ ಪರ ಸಂಘಟನೆಗಳ ಸದಸ್ಯರು ಮಾಲ್​ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ಹೊರಗಹಾಕಿದ್ದರು.

ಕೂಡಲೇ ಎಚ್ಚೆತ್ತ ಮಾಲ್​ ಉಸ್ತುವಾರಿ ಸುರೇಶ್​ ರೈತ ಫಕೀರಪ್ಪ ಅವರಿಗೆ ಕ್ಷಮೆಯಾಚಿಸಿದ್ದು, ಅವರಿಗೆ ಸನ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವಮಾನ ಮಾಡಿದ ಗಾರ್ಡ್​​ನನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಜಿಟಿ ಮಾಲ್​ ಉಸ್ತುವಾರಿ ಸುರೇಶ್​ ತಿಳಿಸಿದ್ದಾರೆ.