ನ್ಯೂಸ್

ಕರೊನಾ ಬರೆ ಸಾಲಕ್ಕೆ ಮೊರೆ; ಜಿಎಸ್​ಟಿ ಪರಿಹಾರ ಕೊರತೆ ನೀಗಿಸಲು ರಾಜ್ಯ ಸರ್ಕಾರ ನಿರ್ಧಾರ

lakshmihegde

ಬೆಂಗಳೂರು: ಜಿಎಸ್​ಟಿ ಅನುಷ್ಠಾನದಿಂದ ಉಂಟಾಗುವ ಹಣಕಾಸು ಕೊರತೆ ನೀಗಿಸಿಕೊಳ್ಳಲು ಸಾಲ ಮಾಡುವ ಆಯ್ಕೆಯನ್ನು ಆದ್ಯತೆಯಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, 33 ಸಾವಿರ ಕೋಟಿ ರೂ. ಸಾಲ ಪಡೆಯುವ ಸಂಬಂಧ ಸಂಪುಟ ಸಭೆಯ ಅನುಮೋದನೆ ಪಡೆದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಜಿಎಸ್​ಟಿ ಪರಿಹಾರದ ಬಗ್ಗೆ ರಾಜ್ಯಗಳು ತಮ್ಮ ಆದ್ಯತೆ ಮತ್ತು ಅಭಿಪ್ರಾಯ ನೀಡಲು ಅನುವು ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ನೀಡಿತ್ತು. ಅದರಲ್ಲಿ ಜಿಎಸ್​ಟಿ ಅನುಷ್ಠಾನದಿಂದ ಉಂಟಾಗುವ ಕೊರತೆ ನೀಗಿಸಿಕೊಳ್ಳಲು ಸಾಲ ಮಾಡುವುದು ಮೊದಲ ಆಯ್ಕೆಯಾಗಿದೆ. ರಾಜ್ಯ ಸರ್ಕಾರ ಇದನ್ನೇ ಆಯ್ಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿ ತಂದು ಸಾಲ ಪಡೆಯಲು ಸಂಪುಟದಲ್ಲಿ ತೀರ್ವನಿಸಿರುವುದಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಷರತ್ತಿಗೆ ಒಳಪಡಲ್ಲ: ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್- ರಾಜ್ಯದ ಒಟ್ಟು ಉತ್ಪನ್ನ(ಜಿಎಸ್​ಡಿಪಿ) ಹೆಚ್ಚುವರಿ ಶೇ.2 ಅಂದರೆ 36 ಸಾವಿರ ಕೋಟಿ ರೂ. ಸಾಲ ಯಾವುದೇ ಷರತ್ತಿಗೆ ಒಳಪಡದೆ ಲಭ್ಯವಿರುತ್ತದೆ. ಅದರ ಆಧಾರದ ಮೇಲೆ ನಾವೀಗ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 33 ಸಾವಿರ ಕೋಟಿ ರೂ. ಸಾಲ ಪಡೆಯಲು ನಿರ್ಣಯಿಸಿದ್ದೇವೆ ಎಂದು ಸಚಿವರು ವಿವರಿಸಿದರು.

ಬೇಡಿಕೆಯಲ್ಲಿ ರಾಜಿ ಇಲ್ಲ: ರಾಜ್ಯಕ್ಕೆ ಜಿಎಸ್​ಟಿ ಪರಿಹಾರ 11 ಸಾವಿರ ಕೋಟಿ ರೂ. ಬರಬೇಕಿತ್ತು. ಆ ಬೇಡಿಕೆ ವಿಚಾರದಲ್ಲಿ ನಾವು ರಾಜಿ ಆಗಿಲ್ಲ. ಎಲ್ಲ ರಾಜ್ಯಗಳ ಬೇಡಿಕೆಯ ಹಾಗೆ ನಮ್ಮ ಬೇಡಿಕೆಯೂ ಇದೆ. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ನಾವು ಸದ್ಯದ ಪರಿಸ್ಥಿತಿಯಲ್ಲಿ ಸಾಲ ಪಡೆಯಲು ತೀರ್ವನಿಸಿದ್ದೇವೆ ಎಂದು ಮಾಧುಸ್ವಾಮಿ ತಿಳಿಸಿದರು.

ವೆಚ್ಚಕ್ಕೂ ಸಾಲ ಬಳಕೆ : ಇಲ್ಲಿಯವರೆಗೆ ಸರ್ಕಾರ 47 ಸಾವಿರ ಕೋಟಿ ರೂ. ಸಾಲ ಪಡೆದಿದೆ. ಇದನ್ನು ನಾವು ಕ್ಯಾಪಿಟಲ್ ಇನ್ವೆಸ್ಟ್​ಮೆಂಟ್​ಗೆ ಬಳಸಿಕೊಂಡಿದ್ದೇವೆ. ಆದರೆ, ಈ ಬಾರಿ ಪಡೆಯುವ ಸಾಲವನ್ನು ವೆಚ್ಚಕ್ಕೂ ಬಳಸಬೇಕಾಗಬಹುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಅರುಣಾಚಲ ಗಡಿಯಲ್ಲಿ ಚೀನಿ ಸೈನಿಕರು: ಸನ್ನದ್ಧ ಸ್ಥಿತಿಯಲ್ಲಿ ಭಾರತೀಯ ಯೋಧರು

ಆದಾಯದಲ್ಲಿ ಕೊರತೆ

ಹೆಚ್ಚುವರಿ ಸಾಲ ಪಡೆಯುವ ಮಾತ್ರಕ್ಕೆ ಸರ್ಕಾರದಲ್ಲಿ ದುಡ್ಡಿನ ಕೊರತೆ ಎದುರಾಗಿದೆ ಎಂದಲ್ಲ. ಮಾಮೂಲಿ ಆದಾಯದಲ್ಲಿ ಸ್ವಲ್ಪ ಕೊರತೆಯಾಗಿದೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಪ್ರಪಂಚದೆಲ್ಲೆಡೆ ಕರೊನಾದಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಆ ಕಾರಣಕ್ಕಾಗಿ ನಮ್ಮ ರಾಜ್ಯದಲ್ಲೂ ರಾಜಸ್ವ ಸಂಗ್ರಹದಲ್ಲಿ ಸ್ವಲ್ಪ ಕಡಮೆಯಾಗಿರುವುದು ನಿಜ ಎಂದು ಪ್ರಶ್ನೆಯೊಂದಕ್ಕೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಜನರ ಮೇಲೆ ಸಾಲದ ಶೂಲ?

ರಾಜ್ಯ ಸರ್ಕಾರ ತನ್ನ ಖರ್ಚು, ನೌಕರರ ಸಂಬಳ ಮತ್ತು ಅಭಿವೃದಿ ಕಾರ್ಯಕ್ಕೆ ಮಾಡಬೇಕಾದ ವೆಚ್ಚಕ್ಕಾಗಿ ಸಾಲ ಪಡೆಯುವುದು ಅನಿವಾರ್ಯ. 33 ಸಾವಿರ ಕೋಟಿ ರೂ. ಸಾಲ ಪಡೆಯುತ್ತದೆಯಾದರೂ ಆ ಸಾಲ ತೀರಿಸಲು ಬೇರೆ ಆದಾಯ ಮೂಲವನ್ನು ಹುಡುಕಿಕೊಳ್ಳಬೇಕಾಗಿದೆ. ಆಸ್ತಿ ಮಾರಾಟ ಅಥವಾ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಆದಾಯ ಕ್ರೋಡೀಕರಿಸಬೇಕಾಗುತ್ತದೆ. ಇಂಧನ, ಅಬಕಾರಿ, ವಿವಿಧ ಶುಲ್ಕದ ದರ ಹೆಚ್ಚಳ ರೂಪದಲ್ಲಿ ಸೆಸ್ ಸಂಗ್ರಹಿಸುವುದೇ ಸದ್ಯಕ್ಕಿರುವ ದಾರಿ. ಈ ದಾರಿ ತುಳಿದರೆ ಅನಿವಾರ್ಯವಾಗಿ ಜನರ ಮೇಲೆ ತೆರಿಗೆ ಹೊರೆ ಬೀಳಲಿದೆ. ತಾತ್ಕಾಲಿಕ ಅವಧಿಗೆ ಪೆಟ್ರೋಲ್, ಡೀಸೆಲ್ ದರದ ಮೇಲಿನ ತೆರಿಗೆಯನ್ನು 1-2 ರೂ. ಹೆಚ್ಚಿಸಬಹುದು, ಮದ್ಯ ಮಾರಾಟದಲ್ಲೂ ಶೇಕಡವಾರು ಹೆಚ್ಚಿಸಬಹುದು. ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿದಂತೆ 2020-21ನೇ ಸಾಲಿಗೆ 3.68 ಲಕ್ಷ ಕೋಟಿ ರೂ. ಹೊಣೆಗಾರಿಕೆ ಸರ್ಕಾರದ ಮೇಲೆ ಬೀಳಲಿದೆ. ಇದರಲ್ಲಿ 52,918 ಕೋಟಿ ರೂ. ಸಾಲ ಮಾಡುವ ಪ್ರಸ್ತಾಪ ಮಾಡಲಾಗಿತ್ತು. ಇದೀಗ ತೆರಿಗೆ ಖೋತಾ ಹಿನ್ನೆಲೆಯಲ್ಲಿ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಇದರ ಸ್ಪಷ್ಟ ಚಿತ್ರಣ ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.

ಕರೊನಾ ವೈರಾಣು ಕಾರಣದಿಂದ ರಾಜಸ್ವ ಸಂಗ್ರಹ ಕುಂಠಿತವಾಗಿದೆ. ಆದಾಯ ಕೊರತೆಯಿಂದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಬಾರದು ಎಂಬುದು ಸರ್ಕಾರದ ಸಂಕಲ್ಪ. ಈ ಕಾರಣದಿಂದ ಹೆಚ್ಚುವರಿ ಸಾಲ ಪಡೆಯುವ ಅನಿವಾರ್ಯತೆ ಎದುರಾಗಿದೆ. ಹೆಚ್ಚುವರಿ ಸಾಲ ನಮಗೆ ಹೊರೆ ಆಗುತ್ತದೆ ನಿಜ.ಆದರೆ, ಸಾಲ ಪಡೆಯದೆ ಗತ್ಯಂತರವಿಲ್ಲ . | ಮಾಧುಸ್ವಾಮಿ ಕಾನೂನು ಸಚಿವ