ನ್ಯೂಸ್

'ಜಿಎಸ್‌ಟಿ' ಸುಧಾರಣೆ; ಭಾರತೀಯರಿಗೆ ಸಿಗಲಿದೆ 2 ಲಕ್ಷ ಕೋಟಿ ರೂ.; ನಿರ್ಮಲಾ ಸೀತಾರಾಮನ್​| gst

ವಿಶಾಖಪಟ್ಟಣ; ಜಿಎಸ್‌ಟಿ ಸುಧಾರಣೆಗಳು ಭಾರತದ ಆರ್ಥಿಕತೆಗೆ 2 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇಂದು (ಸೆ.17) ವಿಶಾಖಪಟ್ಟಣದಲ್ಲಿ ನಡೆದ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಕುರಿತು ಜನಸಂಪರ್ಕ ಮತ್ತು ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪುನರ್​ರಚಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಸಾರ್ವಜನಿಕರ ಕೈಗೆ 2 ಲಕ್ಷ ಕೋಟಿ ರೂ.ಗಳನ್ನು ಹೇಗೆ ತುಂಬಲಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

ಸೆಪ್ಟೆಂಬರ್ 22 ರಂದು ಪ್ರಾರಂಭವಾಗುವ GST 2.0 ಉಪಕ್ರಮದ ಭಾಗವಾಗಿ, ಹೊಸ ರಚನೆಯು ಪ್ರಸ್ತುತ ಬಹು-ಶ್ರೇಣೀಕೃತ ವ್ಯವಸ್ಥೆಯನ್ನು ಸರಳಗೊಳಿಸಲಿದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಶೇಕಡಾ 12 ಮತ್ತು ಶೇಕಡಾ 28 ಜಿಎಸ್​ಟಿ ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗುತ್ತದೆ. ಜಿಎಸ್‌ಟಿ ಮಂಡಳಿಯು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ಇದು ಸ್ವಾತಂತ್ರ್ಯದ ಬಳಿಕ ರಚಿಸಲಾದ ಏಕೈಕ ಸಾಂವಿಧಾನಿಕ ಸಂಸ್ಥೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್​ ವಿವರಿಸಿದ್ದಾರೆ.

ದಿನನಿತ್ಯದ ನಾಗರಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಮತ್ತು ಗ್ರಾಹಕರ ವೆಚ್ಚವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರವು ಹೊಸದಾಗಿ ತೆರಿಗೆ ಸುಧಾರಣೆಯನ್ನು ಜಾರಿಗೆ ತರುತ್ತಿದೆ. ಈ ಹೊಸ ಪೀಳಿಗೆಯ ತೆರಿಗೆ ಪದ್ಧತಿಯಿಂದ ಕೇವಲ ಎರಡು ಸ್ಲ್ಯಾಬ್‌ಗಳೊಂದಿಗೆ (5% ಮತ್ತು 18%), ರೂ. 2 ಲಕ್ಷ ಕೋಟಿ ಆರ್ಥಿಕತೆಗೆ ಬಂದು ಸೇರಲಿದೆ. ಇದರಿಂದ ಸಾಮಾನ್ಯ ಜನರ ಕೈಯಲ್ಲಿ ನಗದು ಇರಲಿದೆ ಎಂದು ಸೀತಾರಾಮನ್​ ತಿಳಿಸಿದ್ದಾರೆ.

(ಏಜೆನ್ಸೀಸ್)

ಸೆಪ್ಟೆಂಬರ್ 3 ರಂದು ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್​ಟಿ ಕೌನ್ಸಿಲ್ ತನ್ನ 56 ನೇ ಸಭೆಯಲ್ಲಿ ಶಾಂಪೂ ಮತ್ತು ಹೇರ್ ಆಯಿಲ್ ನಂತಹ ದೈನಂದಿನ ಬಳಕೆಯ ಉತ್ಪನ್ನಗಳಿಂದ ಹಿಡಿದು ಆಟೋಮೊಬೈಲ್ ಮತ್ತು ಟೆಲಿವಿಷನ್​ಗಳವರೆಗೆ ಹಲವಾರು ವಸ್ತುಗಳ ಮೇಲಿನ ದರಗಳನ್ನು ಕಡಿತಗೊಳಿಸಲಾಗಿದೆ. ಜಿಎಸ್‌ಟಿ ಮಂಡಳಿಯು 350ಕ್ಕೂ ಹೆಚ್ಚು ಉತ್ಪನ್ನಗಳ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಲೆಕ್ಕಾಚಾರ ಮಾಡಿ, ಕೇವಲ ಶೇ 5 ಮತ್ತು ಶೇ 18ರಂತೆ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.