ನ್ಯೂಸ್

ಆಗಸ್ಟ್​ 5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ: ಇಂಧನ ಸಚಿವ ಕೆ.ಜೆ. ಜಾರ್ಜ್​

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಗೆ ಆಗಸ್ಟ್​ 5ರಂದು ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್​ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಜಾರ್ಜ್​ ಭಾರತ್​ ಜೋಡೋ ಯಾತ್ರೆ ಸಂದರ್ಭದಲ್ಲಿ ನಾವು ಸಂವಾದದ ಮೂಲಕ ಜನರ ಕಷ್ಟಗಳನ್ನು ಆಲಿಸಿದ್ದೆವು. ಬೆಲೆ ಏರಿಕೆಯಿಂದ ತತ್ತರಿಸಿದ ಜನ ಹಲವು ಕಾರಣಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದರು.

ನೋಂದಣಿ ಮಾಡಲು ಅವಕಾಶ ಇದೆ

ಜನರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ಅದರಂತೆ ಗೃಹಜ್ಯೋತಿ ಕೂಡ ಒಂದಾಗಿದ್ದು, ಆಗಸ್ಟ್​ 5ರಂದು ಕಲಬುರಗಿಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಜುಲೈ ತಿಂಗಳಿನಿಂದಲೇ ಉಚಿತ ವಿದ್ಯುತ್​ ಕೊಡಲಾಗುತ್ತಿದ್ದು, ಅದರ ಬಿಲ್​ಅನ್ನು ಆಗಸ್ಟ್​ ತಿಂಗಳಲ್ಲಿ ಕೊಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆಗೆ ಇದುವರೆಗೂ 1 ಕೋಟಿ 45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ಇದ್ದಾರೆ, ಅವರು ಇನ್ನೂ ನೋಂದಣಿ ಮಾಡಲು ಅವಕಾಶ ಇದೆ.

ನೋಂದಣಿ ಮಾಡುವ ಕೊನೆಯ ದಿನಾಂಕವನ್ನು ನಿರ್ಧಾರ ಮಾಡಿಲ್ಲ. ಈ ನಿಟ್ಟಿನಲ್ಲಿ ಅರ್ಹತೆ ಉಳ್ಳವರು ಲಾಭ ಪಡೆದುಕೊಳ್ಳಬಹುದು ಎಂದು ಸಚಿವ ಜಾರ್ಜ್​ ತಿಳಿಸಿದ್ದಾರೆ.