ನ್ಯೂಸ್

ರಾಜ್ಯದಲ್ಲಿ ಅಂತರ್ಜಲ ವೃದ್ಧಿ!

Webdesk - Manjunatha B

ಕೀರ್ತಿನಾರಾಯಣ ಸಿ. ಬೆಂಗಳೂರು

ಅತಿಯಾದ ಅಂತರ್ಜಲ ಬಳಕೆಯಿಂದ ಪ್ಲೋರೈಡ್​ಯುುಕ್ತ ನೀರಿನ ಸಮಸ್ಯೆ ಹಾಗೂ ಜಲಮೂಲ ಕೊರತೆಯಿಂದ ಬಳಲುತ್ತಿದ್ದ ರಾಜ್ಯದ 255 ಗ್ರಾಪಂಗಳಲ್ಲಿ ಅಂತರ್ಜಲಮಟ್ಟ ಗಣನೀಯವಾಗಿ ವೃದ್ಧಿಯಾಗಿದೆ. ಸುಸ್ಥಿರ ಅಂತರ್ಜಲ ನಿರ್ವಹಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಭೂ ಜಲ ಯೋಜನೆ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಬೇರೆ ಬೇರೆ ಕ್ರಮ ಫಲಕೊಟ್ಟಿದೆ. ಯೋಜನೆ ಜಾರಿಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಅಂತರ್ಜಲ ಕೊರತೆ ಎದುರಿಸುತ್ತಿದ್ದ ದೇಶದ 7 ರಾಜ್ಯಗಳಲ್ಲಿ 2020ರಿಂದ ಮುಂದಿನ 6 ವರ್ಷದ ಅವಧಿಗೆ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕದ 14 ಜಿಲ್ಲೆಗಳ 1199 ಗ್ರಾಪಂಗಳಲ್ಲಿ 2020ರ ಏ.1ರಿಂದ ಯೋಜನೆ ಟೇಕಾಫ್ ಆಗಿತ್ತು. 1199 ಗ್ರಾಪಂಗಳ ಪೈಕಿ 255ರಲ್ಲಿ 2023-24ರ ಅವಧಿಯಲ್ಲಿ ಅಂರ್ತಜಲಮಟ್ಟ ಏರಿಕೆಯಾಗಿರುವುದನ್ನು ಕೇಂದ್ರ ಜಲಶಕ್ತಿ ಸಚಿವಾಲಯ ದೃಢಪಡಿಸಿದೆ. ಯೋಜನೆಯ ಜತೆಜತೆಗೆ ಬೇರೆಬೇರೆ ಕಾರಣಗಳಿಗೂ ಅಂತರ್ಜಲ ಮರುಪೂರಣಗೊಂಡಿದೆ ಎಂದು ಮಾಹಿತಿ ನೀಡಿದೆ.

ಜಲ ಭದ್ರತಾ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ 1018 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚ ಮಾಡಲಾಗಿದೆ. ಯೋಜನೆ ಜಾರಿಯಾದ 1199 ಗ್ರಾಪಂಗಳಲ್ಲಿ ಅಂದಾಜು 1.82 ಲಕ್ಷ ಹೆಕ್ಟೇರ್ ಭೂ ಪ್ರದೇಶವನ್ನು ಸಮರ್ಥ ನೀರಿನ ಬಳಕೆಗೆ ಒಳಪಡಿಸಿಕೊಳ್ಳಲಾಗಿದೆ.

ಕರುನಾಡಿಗೆ ಬೇಕು 1201 ಕೋಟಿ!: ಕರ್ನಾಟಕದಲ್ಲಿ ಯೋಜನೆ ಜಾರಿಗೆ ಅಂದಾಜು 1201 ಕೋರಿ ರೂ. ಬೇಕಾಗಿದೆ. ಇದರಲ್ಲಿ 783 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 609 ಕೋಟಿ ರೂ. ಖರ್ಚು ಮಾಡಲಾಗಿದೆ. ಒಟ್ಟಾರೆ ವೆಚ್ಚದ ಶೇ.50 ಅನ್ನು ಕೇಂದ್ರ ಸರ್ಕಾರ ಭರಿಸಿದರೆ ಉಳಿದ ಅರ್ಧಭಾಗ ಅನುದಾನವನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ಕೊಡುತ್ತಿದೆ. ಕೋಲಾರ ಜಿಲ್ಲೆಯ ಐದು ತಾಲೂಕುಗಳಲ್ಲಿ ಯೋಜನೆ ಜಾರಿಯಾಗಿದೆ. ಬಂಗಾರಪೇಟೆ ತಾಲೂಕಲ್ಲಿ ವಾರ್ಷಿಕ ಅಂತರ್ಜಲ ಲಭ್ಯತೆ 3953 ಹೆಕ್ಟೇರ್ ಮೀಟರ್ (ಹೆ.ಮೀ) ಇದೆ. ಆದರೆ, ವಾರ್ಷಿಕ ಬಳಕೆ ಪ್ರಮಾಣ 8396 ಹೆ.ಮೀ (ಶೇ.212) ಇದೆ. ಕೋಲಾರ ತಾಲೂಕಿನಲ್ಲಿ ವಾರ್ಷಿಕ ಲಭ್ಯತೆ ಪ್ರಮಾಣ 16814 ಹೆ.ಮೀ ಇದೆ. ವಾರ್ಷಿಕ ಬಳಕೆ 36036 ಹೆ.ಮೀ (ಶೇ.214) ಇದೆ. ಮಾಲೂರು ತಾಲೂಕಿನಲ್ಲಿ ವಾರ್ಷಿಕ ಲಭ್ಯತೆ 3782 ಹೆ.ಮೀ ಇದ್ದರೆ ಬಳಕೆ ಪ್ರಮಾಣ ವಾರ್ಷಿಕ 7481 ಹೆ.ಮೀ (ಶೇ.198) ಇದೆ. ಮುಳಬಾಗಿಲಿನಲ್ಲಿ 7626 ಹೆ.ಮೀ ಅಂತರ್ಜಲ ಲಭ್ಯತೆ ಇದ್ದರೆ ಬಳಕೆ ಪ್ರಮಾಣ 15816 ಹೆ.ಮೀ (ಶೇ.207) ಇದೆ. ಶ್ರೀನಿವಾಸಪುರ ತಾಲೂಕಿನಲ್ಲಿ 7364 ಹೆ.ಮೀ ಇದ್ದರೆ ಬಳಕೆ ಪ್ರಮಾಣ 15812 (ಶೇ.213) ಇದೆ.

ಅಂತರ್ಜಲ ವೃದ್ಧಿ ಹೇಗೆ?

  • ಅತಿಯಾದ ಅಂರ್ತಜಲ ಬಳಕೆ ಕಡಿಮೆಗೊಳಿಸಿ ಭೂಜಲ ಅಭಿವೃದ್ಧಿಗೊಳಿಸುವ ಯೋಜನೆ
  • ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಣೆ, ಸುಸ್ಥಿರ ಅಂತರ್ಜಲ ನಿರ್ವಹಣೆಗೆ ಜಾಗೃತಿ
  • ಜಲಮೂಲ ಅಭಿವೃದ್ಧಿ, ಅಂತರ್ಜಲ ಮರು ಪೂರಣಕ್ಕೆ ಬೇಕಾದ ಕ್ರಮಗಳ ಜಾರಿಗೆ ಸಲಹೆ

ಯಾವೆಲ್ಲ ರಾಜ್ಯಗಳಲ್ಲಿ ಜಾರಿ?

  • ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ
  • 7 ರಾಜ್ಯಗಳ 80 ಜಿಲ್ಲೆಗಳಲ್ಲಿ ನೀರಿನ ಅಂತರ್ಜಲ ಬಳಕೆ ಹೆಚ್ಚಿರುವ 8,203 ಗ್ರಾಪಂಗಳಲ್ಲಿ ಜಾರಿ
  • ಒಟ್ಟಾರೆ ಯೋಜನೆ ಅನುಷ್ಠಾನಕ್ಕೆ 6 ವರ್ಷದ ಅವಧಿಯಲ್ಲಿ 6000 ಕೋಟಿ ರೂ. ಖರ್ಚು ವೆಚ್ಚ

ಅಟಲ್ ಭೂ ಜಲ ಯೋಜನೆಯ ಅನುಷ್ಠಾನ ದಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯಿಂದ ಲಭ್ಯವಾಗು ತ್ತಿರುವ ದತ್ತಾಂಶದ ಆಧಾರದ ಮೇಲೆ, ಅಂತರ್ಜಲ ಮಟ್ಟ ಕುಸಿಯುತ್ತಿರುವ ಪ್ರದೇಶಗಳನ್ನು ಗುರುತಿಸಿ, ಆ ಪ್ರದೇಶಗಳಲ್ಲಿ ಕೆರೆ-ಕಟ್ಟೆಗಳನ್ನು ತುಂಬಿಸಲು ಆದ್ಯತೆ ನೀಡಲಾಗಿದೆ. ಇದಕ್ಕೆ ಸಿಎಂ, ಡಿಸಿಎಂ ಪೋ›ತ್ಸಾಹ ನೀಡುತ್ತಿದ್ದಾರೆ.

| ಎನ್.ಎಸ್. ಭೋಸರಾಜು ಸಣ್ಣ ನೀರಾವರಿ ಸಚಿವ