ನವದೆಹಲಿ: ನಿರೀಕ್ಷೆಯಂತೆ ಕರೊನಾ ಮಹಾಮಾರಿ ಭಾರತದ ಆರ್ಥಿಕತೆಗೆ ಮಹಾಘಾತ ನೀಡಿದೆ. ಲಾಕ್ಡೌನ್ ಪರಿಣಾಮದಿಂದಾಗಿ ಭಾರತದ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) 2019-20ರ ಕೊನೆಯ ತ್ರೖೆಮಾಸಿಕದಲ್ಲಿ ಶೇ. 3.1ಕ್ಕೆ ಕುಸಿದು ಮೂರನೇ ತ್ರೖೆಮಾಸಿಕಕ್ಕಿಂತ ಶೇ.1 ಕಡಿಮೆ ದಾಖಲಿಸಿದೆ. ಆರ್ಥಿಕ ವರ್ಷದ ಒಟ್ಟಾರೆ ಜಿಡಿಪಿ ಶೇ. 4.2ಕ್ಕೆ ಇಳಿದಿದ್ದು 11 ವರ್ಷದ ಹಿಂದಿನ ಮಟ್ಟಕ್ಕೆ ತಲುಪಿದೆ.
2019-20ರಲ್ಲಿ ಜಿಡಿಪಿ ನಿರೀಕ್ಷೆಯಂತೆ ಇರಲಿಲ್ಲ. ಮೊದಲ ತ್ರೖೆಮಾಸಿಕದಲ್ಲಿ (ಏಪ್ರಿಲ್-ಜೂನ್) ಶೇ. 5.6 ಅಂದಾಜಿಸಲಾಗಿತ್ತಾದರೂ ದಾಖಲಾಗಿದ್ದು ಶೇ. 5.2 ಮಾತ್ರ. ಎರಡನೇ ತ್ರೖೆಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಶೇ. 5.1 ನಿರೀಕ್ಷೆ ಇತ್ತು. ಆದರೆ, ದಾಖಲಾಗಿದ್ದು ಶೇ. 4.4. ಮೂರನೇ ತ್ರೖೆಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಅಂದಾಜಿಸಲಾಗಿದ್ದ ಜಿಡಿಪಿ ಶೇ. 4.7, ದಾಖಲಾಗಿದ್ದು ಶೇ. 4.1. 2019-20ರ ಒಟ್ಟಾರೆ ಜಿಡಿಪಿ ಶೇ. 5 ಇರಲಿದೆ ಎಂದು ಕಳೆದ ಜನವರಿಯಲ್ಲಿ ಅಂದಾಜಿಸಲಾಗಿತ್ತು. ಆದರೆ, ಶೇ. 4.2ಕ್ಕೆ ಕುಸಿದಿದೆ. 2018-19ರ ಕಡೆಯ ತ್ರೖೆಮಾಸಿಕದಲ್ಲಿ ಶೇ. 5.7 ಇದ್ದ ಜಿಡಿಪಿ, ಒಟ್ಟಾರೆ ಆರ್ಥಿಕ ವರ್ಷದಲ್ಲಿ ಶೇ. 6.1 ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ.
ಇದನ್ನೂ ಓದಿ ಸಚಿವರಿಂದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಭೇಟಿ
ವಿತ್ತೀಯ ಕೊರತೆ ವಿಸ್ತಾರ: ಜಿಡಿಪಿಯಲ್ಲಿ ನಿರೀಕ್ಷಿತ ವೃದ್ಧಿ ಕಾಣದ ಬೆನ್ನಿಗೆ ವಿತ್ತೀಯ ಕೊರತೆ ಶೇ. 4.6ಕ್ಕೆ ವಿಸ್ತರಿಸಿದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಆದಾಯ ಸಂಗ್ರಹದಲ್ಲಿ ಹಿನ್ನಡೆ. ಫೆಬ್ರವರಿಯಲ್ಲಿ ಶೇ. 3.3 ಇದ್ದ ವಿತ್ತೀಯ ಕೊರತೆಯು ಆರ್ಥಿಕ ವರ್ಷದ ಅಂತ್ಯಕ್ಕೆ ಶೇ. 3.8 ಇರಲಿದೆ ಎಂದು 2020-21ರ ಬಜೆಟ್ ಮಂಡನೆಯ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ, ಇದು ಅಂದಾಜಿಸಿದ್ದಕ್ಕಿಂತ ಶೇ. 0.8ರಷ್ಟು ಹೆಚ್ಚಳವಾಗಿ ಶೇ. 4.6ಕ್ಕೆ ತಲುಪಿದೆ. ಕಳೆದ ಆರ್ಥಿಕ ವರ್ಷ -ಠಿ; 19.31 ಲಕ್ಷ ಕೋಟಿ ತೆರಿಗೆ ಸಂಗ್ರಹ ನಿರೀಕ್ಷಿಸಲಾಗಿತ್ತು ಆದರೆ, ಸಂಗ್ರಹವಾಗಿದ್ದು, -ಠಿ; 17.50 ಲಕ್ಷ ಕೋಟಿ. 2019-20ರ ವಿತ್ತೀಯ ಕೊರತೆ ಶೇ. 4.59 ಮತ್ತು ಆದಾಯ ಖೋತಾ ಶೇ. 3.27 ಇದೆ ಎಂದು ಮಹಾಲೇಖಪಾಲರ (ಸಿಜಿಎ) ತಿಳಿಸಿದೆ.
ಜಿವಿಎಯಲ್ಲಿ ಏರಿಳಿತ: 2019-20ರ ನಾಲ್ಕನೇ ತ್ರೖೆಮಾಸಿಕದಲ್ಲಿ ಕೈಗಾರಿಕಾ ವಲಯದ ನಿವ್ವಳ ಮೌಲ್ಯ ವೃದ್ಧಿ (ಜಿವಿಎ) ದರವು ಶೇ. 1.4ಕ್ಕೆ ಕುಸಿದಿದೆ. 2018-19ರಲ್ಲಿ ಇದು ಕಡೆಯ ತ್ರೖೆಮಾಸಿಕದಲ್ಲಿ ಶೇ. 2.1 ಇತ್ತು. ಕೃಷಿ ವಲಯದ ಜಿವಿಎ ಶೇ. 5.9ಕ್ಕೆ ಏರಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಶೇ. 2.2, ಗಣಿ ವಲಯದಲ್ಲಿ ಶೇ. 5.2, ವಿದ್ಯುತ್, ಅನಿಲ, ನೀರು ಸರಬರಾಜು ಇನ್ನಿತರ ಅತ್ಯವಶ್ಯಕ ಪೂರೈಕೆ ವಲಯದಲ್ಲಿ ಶೇ. 4.5 ಜಿವಿಎ ದಾಖಲಾಗಿದೆ.
ಇದನ್ನೂ ಓದಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಕಳೆದ ವರ್ಷಕ್ಕಿಂತ ಏರಿಕೆ ಕಂಡಿದೆ. ವಾಣಿಜ್ಯ, ಹೊಟೇಲ್, ಸರಕು ಸಾಗಣೆ, ಸಂವಹನ, ವಾರ್ತಾ ಮತ್ತು ಪ್ರಸಾರದ ಸೇವಾ ವಲಯದಲ್ಲಿ ಶೇ. 2.6, ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವಾ ವಲಯದಲ್ಲಿ ಶೇ. 2.4, ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇನ್ನಿತರ ಸೇವಾ ಕ್ಷೇತ್ರದಲ್ಲಿ ಶೇ. 10.1 ಜಿವಿಎ ದಾಖಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಇಳಿಕೆ ಕಂಡಿದೆ.
ಚೀನಾ ಜಿಡಿಪಿ ಏರಿಕೆ: 2020ರ ಜನವರಿಯಿಂದ ಮಾರ್ಚ್ವರೆಗಿನ ತ್ರೖೆಮಾಸಿಕದಲ್ಲಿ ಚೀನಾದ ಜಿಡಿಪಿ ಶೇ. 6.8 ಇದ್ದು, ಭಾರತಕ್ಕಿಂತ ಶೇ. 3.7ರಷ್ಟು ಮುನ್ನಡೆ ಕಂಡಿದೆ.
ಕೈಗಾರಿಕಾ ಉತ್ಪಾದನೆ ಶೇ. 38.1
2020-21ನೇ ಆರ್ಥಿಕ ವರ್ಷದ ಮೊದಲ ತಿಂಗಳಿನಲ್ಲಿ ಎಂಟು ಪ್ರಮುಖ ವಲಯದ ಕೈಗಾರಿಕೆಗಳ ಉತ್ಪಾದನಾ ಸೂಚ್ಯಂಕದ (ಐಐಪಿ) ದರ ಶೇ. 38.1ಕ್ಕೆ ಇಳಿದಿದೆ. ಕರೊನಾದಿಂದಾಗಿ ಲಾಕ್ಡೌನ್ ಘೋಷಣೆಯಾದ ಕಾರಣ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕ ದೇಶ ಭಾರತದ ಕೈಗಾರಿಕೆಗಳ ಚಟುವಟಿಕೆ ಮತ್ತು ಸಾಗಣೆ ಸ್ಥಗಿತಗೊಂಡಿತ್ತು. ಅತ್ಯವಶ್ಯಕ ವಸ್ತುಗಳನ್ನು ಬಿಟ್ಟು ಉಳಿದ ಸಾಮಗ್ರಿಗಳ ಉತ್ಪಾದನೆ ಮತ್ತು ಸಾಗಣೆ ಸಂಪೂರ್ಣವಾಗಿ ನಿಂತಿತು. ಇದರಿಂದ ಏಪ್ರಿಲ್ನಲ್ಲಿ ಉತ್ಪಾದನಾ ದರದಲ್ಲಿ ಈ ಕುಂಠಿತವಾಗಿದೆ. ಲಾಕ್ಡೌನ್ನ ನಾಲ್ಕನೇ ಚರಣದಲ್ಲಿ ನಿರ್ಬಂಧ ಸಡಿಲಗೊಂಡ ಮೇಲೆ ಕೈಗಾರಿಕೆಗಳು ಮರು ಆರಂಭಗೊಂಡಿವೆ. ಲಾಕ್ಡೌನ್ ಕಾರಣ ಐಐಪಿಯಲ್ಲಿ ಎಷ್ಟು ಹಿನ್ನಡೆ ಆಗಿದೆ ಎಂಬ ನಿಖರ ಮಾಹಿತಿ 2020-21ರ ಮೊದಲ ತ್ರೖೆಮಾಸಿಕದ ಅಂತ್ಯಕ್ಕೆ ದೊರೆಯಲಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ದೊಡ್ಡ ಆರ್ಥಿಕ ಹಿಂಜರಿತ ಭೀತಿ
ಕಳೆದ ನಾಲ್ಕು ದಶಕಗಳಲ್ಲೇ ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ 2020-21ರಲ್ಲಿ ಆಗಲಿದೆ. ಈ ಹಿನ್ನಡೆಯ ಪರಿಣಾಮ ಏಪ್ರಿಲ್ನಿಂದಲೇ ವ್ಯಕ್ತವಾಗುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಆದರೂ ಈ ಸಾರಿ ಮುಂಗಾರು ಮಳೆ ವಾಡಿಕೆಯಂತೆ ಇರುವ ಮುನ್ಸೂಚನೆ ದೊರೆತಿರುವ ಕಾರಣ ರೈತರ ಮುಖದಲ್ಲಿ ಮಂದಹಾಸ ಕಾಣುವ ಸಾಧ್ಯತೆ ಇದೆ. ಕೃಷಿ ಆಧಾರಿತ ಗ್ರಾಮೀಣ ವಲಯದ ಕೈಗಾರಿಕೆಗಳು ಚೇತರಿಸಿಕೊಳ್ಳಲಿವೆ. ಇದರಿಂದ ವಲಸೆ ಕಾರ್ವಿುಕರಿಗೆ ಒಂದಿಷ್ಟು ಉದ್ಯೋಗ ಸಿಗುವ ಭರವಸೆ ಇದೆ. ಇದಕ್ಕೆ ಪೂರಕವಾಗಿ ರೈತರು, ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಸಾಲ, ದೊರೆಯುವ ವಿವಿಧ ಉಪಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಆರ್ಬಿಐ ಕೂಡ ಇತ್ತೀಚೆಗೆ ರೆಪೊ ದರದಲ್ಲಿ 40 ಮೂಲಾಂಶ ಕಡಿತ ಮಾಡಿದೆ.