ಕಾನ್ಪುರ: ಡ್ರೈವಿಂಗ್ ಗೊತ್ತಿಲ್ಲದಿದ್ದರೂ ವರದಕ್ಷಿಣೆಯಾಗಿ ಕಾರು ಪಡೆದುಕೊಂಡ ವರನೊಬ್ಬ ಟೆಸ್ಟ್ ಡ್ರೈವ್ ಮಾಡುವಾಗ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸಂಬಂಧಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ವರನ ಸೋದರತ್ತೆ ದುರಂತ ಸಾವಿಗೀಡಾಗಿದ್ದು, ಇತರೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರಿ ನೌಕರನಾಗಿರುವ 24 ವರ್ಷದ ಅರುಣ್ ಕುಮಾರ್, ಮದುವೆಗು ಮುನ್ನವೇ ವಧುವಿನ ಕಡೆಯವರಿಂದ ಕಾರನ್ನು ವರದಕ್ಷಿಣೆಯಾಗಿ ಪಡೆದಿದ್ದ. ಆದರೆ, ಅರುಣ್ಗೆ ಡ್ರೈವಿಂಗ್ ಗೊತ್ತಿರಲಿಲ್ಲ. ಹೀಗಿದ್ದರೂ ಟೆಸ್ಟ್ ಡ್ರೈವ್ ಮಾಡುವುದಾಗಿ ಕಾರನ್ನೇರಿದ್ದ. ಮೊದಲೇ ಡ್ರೈವಿಂಗ್ ಗೊತ್ತಿಲ್ಲದಿದ್ದರಿಂದ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಸಂಬಂಧಿಕರು ನಿಂತಿದ್ದ ಗುಂಪಿನ ಕಡೆ ನುಗ್ಗಿಸಿದ್ದಾನೆ. ಇದರ ಪರಿಣಾಮ ಅರುಣ್ ಅವರ ಸೋದರತ್ತೆ ಕಾರಿನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಪುಟ್ಟ ಹುಡುಗಿ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರುಣ್ ಕುಮಾರ್ ಅವರ ಮದುವೆ ಕೆಲವೇ ತಿಂಗಳುಗಳ ಹಿಂದೆ ನಿಶ್ಚಯವಾಗಿತ್ತು. ವರನ ಸಂಬಂಧಿಕರು ವರದಕ್ಷಿಣೆಯಾಗಿ ವಧುವಿನ ಕುಟುಂಬದ ಬಳಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಿಲಕಂ ಪದ್ಧತಿಯ ಸಮಯದಲ್ಲಿ ವಧುವಿನ ಕುಟುಂಬ ಅರುಣ್ ಕುಮಾರ್ಗೆ ಕಾರಿನ ಕೀ ಹಸ್ತಾಂತರ ಮಾಡಿದ್ದರು. ಈ ಸಮಾರಂಭದಲ್ಲಿ ಸಂಬಂಧಿಕರು ಒಂದೆಡೆ ಸೇರಿದ್ದಾಗ, ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಮೃತಳನ್ನು ಸರಳಾ ದೇವಿ (35) ಎಂದು ಗುರುತಿಸಲಾಗಿದೆ. ಅರುಣ್ ಕುಮಾರ್ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಆತನ ವಿರುದ್ಧ ಸಾವಿಗೆ ಕಾರಣವಾದ ಅಜಾಗರೂಕ ಚಾಲನೆ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)