ನ್ಯೂಸ್

VIDEO | ವರನ ಹೆಸರು 'ಯೋಗಿ'; ಮಗಳ ಮದುವೆ ದಿನದಂದು ಅಳಿಯನಿಗೆ ಬುಲ್ಡೋಜರ್ ಗಿಫ್ಟ್​ ನೀಡಿದ ಮಾವ

ಉತ್ತರಪ್ರದೇಶ: ಯೋಗಿ ಆದಿತ್ಯನಾಥ್ ಅಂದಾಗ ನೆನಪಾಗುವುದು ಬುಲ್ಡೋಜರ್! ಯಾಕಂದ್ರೆ ಉತ್ತರಪ್ರದೇಶದಲ್ಲಿ ಯಾರು ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೋ, ಅವರ ಮನೆಗೆ ಬುಲ್ಡೋಜರ್ ಕಳುಹಿಸಿ ಮನೆಯನ್ನೇ ನೆಲಸಮಗೊಳಿಸುತ್ತಿದ್ದರು. ಯೋಗಿ ಆದಿತ್ಯನಾಥ್​​ ಅವರ ಈ ನಡೆ ದೇಶದಾದ್ಯಂತ ಸದ್ದು ಮಾಡಿತ್ತು.

ಇದೀಗ ಉತ್ತರಪ್ರದೇಶದಲ್ಲಿ ಮದುವೆ ಗಂಡಿಗೆ ಬುಲ್ಡೋಜರ್ ಉಡುಗೊರೆ ಸಿಕ್ಕಿದೆ. ಅರ್ರೇ... ವರನಿಗೆ ಕಾರು, ಮನೆ ಗಿಫ್ಟ್ ನೀಡಿರುವುದು ಕೇಳಿದ್ದೇವೆ. ಇದ್ಯಾಕೆ ಬುಲ್ಡೋಜರ್ ಗಿಫ್ಟ್​ ನೀಡಿದ್ರು ಅಂತ ಯೋಚಿಸುತ್ತಿದ್ದರೆ ಉತ್ತರ, ಮದುವೆ ಹುಡುಗನ ಹೆಸರು ಯೋಗೇಂದ್ರ. ಈತನನ್ನು ಎಲ್ಲರೂ ಕರೆಯುವುದು ಯೋಗಿ ಎಂದು. ಇದೀಗ ತನ್ನ ಹೆಸೆರು ಯೋಗಿ ಎಂದಿರುವುದರಿಂದ ತನ್ನ ಮದುವೆ ದಿನದಂದು ಬುಲ್ಡೋಜರ್ ಉಡುಗೊರೆಯಾಗಿ ಪಡೆದಿದ್ದಾನೆ.

ಡಿಸೆಂಬರ್ 15ರಂದು ಹಮೀರ್​​ಪುರ್ ಜಿಲ್ಲೆಯಲ್ಲಿ ಯೋಗಿ ಹಾಗೂ ನೇಹಾ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವಧುವಿನ ತಂದೆ ನಿವೃತ್ತ ಸೈನಿಕ ಪರಶುರಾಮ್ ತಮ್ಮ ಅಳಿಯನಿಗಾಗಿ ಬುಲ್ಡೋಜರ್​ನ್ನು ಮದುವೆ ಮಂಟಪಕ್ಕೆ ತಂದು ಉಡುಗೊರೆ ನೀಡಿದ್ದಾರೆ.

ಇದೀಗ ಬುಲ್ಡೋಜರನ್ನು ಉಡುಗೊರೆಯಾಗಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ಅಳಿಯನಿಗೆ ವರದಕ್ಷಿಣೆಯಾಗಿ ಮಾವ ಬುಲ್ಡೋಜರ್ ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವರ ಯೋಗಿ, ನನ್ನ ಪತ್ನಿ ಯುಪಿಎಸ್​ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾಳೆ. ಅವಳ ಓದಿಗೆ ಸಹಾಯವಾಗುವಂತಹ ಪುಸ್ತಕ ಖರೀದಿಸಲು ಬುಲ್ಡೋಜರ್ ಕೆಲಸದಿಂದ ಬರುವ ಹಣ ಖರ್ಚು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)