ನ್ಯೂಸ್

ವಿವಾಹಕ್ಕೂ ಮುನ್ನವೇ ಪ್ರಾಣಬಿಟ್ಟ ವರ: ಮದುವೆ ಮನೆಯಲ್ಲಿ ಶೋಕ

ಆಸಿಫಾಬಾದ್: ಮದುವೆಗೆ ಮುನ್ನವೇ ವರನೊಬ್ಬ ಬಿಸಿಲ ತಾಪದಿಂದ ಮೃತಪಟ್ಟ ದಾರುಣ ಘಟನೆ ತೆಲಂಗಾಣದಅಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ತಿರುಪತಿ(26) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಮಂಚೇರಿಯಲ್ ಜಿಲ್ಲೆಯ ಮಹಿಳೆಯೊಂದಿಗೆ ಮಧ್ಯಾಹ್ನ ಯುವಕವ ಮದುವೆ ನಡೆಯಬೇಕಿತ್ತು. ಈತನ ಕುಟುಂಬದವರು ಹಾಗೂ ಸಂಬಂಧಿಕರು ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದರು.

ಯುವಕನು ಕೌತಾಳ ಮಂಡಲದ ಗುಡ್ಡಬೋರಿ ಗ್ರಾಮದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚುತ್ತಿದ್ದಾಗ ತೀವ್ರ ಬಿಸಿಲಿನ ಬೇಗೆಯಿಂದಾಗಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ಸ್ಥಳದಲ್ಲೇ ಆತನಿಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಕೊನೆಗೆ ಮನೆಗೆ ತಲುಪಿದ ಯುವಕ ಕೆಲ ಸಮಯದ ನಂತರ ವಾಂತಿ ಮತ್ತು ಭೇದಿ ಶುರುವಾಗಿದ್ದ, ಆತ ತೀವ್ರ ಅಸ್ವಸ್ಥನಾಗಿದ್ದಾನೆ.

ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಯುವಕನ ಸ್ಥಿತಿ ಸುಧಾರಿಸದ ಕಾರಣ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರದಂದು ಆತ ಮೃತಪಟ್ಟಿದ್ದಾನೆ.

ಮದುವೆ ಮನೆಯಲ್ಲಿ ಶೋಕ ಎದುರಾಗಿದ್ದು, ಕೆಲ ದಿನಗಳ ಹಿಂದೆ ಈತನ ಅಣ್ಣನೂ ಅಕಾಲಿಕ ಮರಣವನ್ನು ಹೊಂದಿದ್ದ. ಈ ಎರಡು ಘಟನೆಗಳಿಂದಾಗಿ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ತೆಲಂಗಾಣದಾದ್ಯಂತ ಮಾನ್ಸೂನ್​ ವಿಳಂಬವಾಗಿರುವ ಕಾರಣ ರಾಜ್ಯದಲ್ಲಿ ಬಿಸಿಗಾಳಿ ಬೀಸುತ್ತಿದೆ. ಅಲ್ಲದೇ ಕೆಲವು ಕಡೆ 40 ರಿಂದ 43 ಗರಿಷ್ಠ ತಾಪಮಾನ ದಾಖಲಾಗಿದೆ.(ಏಜೆನ್ಸೀಸ್​)