ಲಖನೌ: ಡೆಂಗ್ಯೂ ವೈರಸ್ ಸೊಳ್ಳೆಗಳಿಂದ ಉಂಟಾಗುವ ಖಾಯಿಲೆಯಾಗಿದ್ದು, ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ವೈದ್ಯರು ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ಕೊಡುವುದನ್ನು ನಾವು ನೋಡಿರುತ್ಥೇವೆ. ಆದರೆ, ವಿಶೇಷ ಪ್ರಕರಣ ಒಂದರಲ್ಲಿ ಡಂಗ್ಯೂದಿಂದ ಬಳಲುತ್ತಿರುವ ವ್ಯಕ್ತಿಯ ಮದುವೆಯನ್ನು ಆಸ್ಪತ್ರೆಯಲ್ಲೇ ನಡೆಸಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಗಾಜಿಯಾಬಾದ್ನ ಮ್ಯಾಕ್ಸ್ ವೈಶಾಲಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಯಾದ ಬಳಿಕ ವರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಮದುವೆಯ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು, ವರ ಅವಿನಾಶ್ ಕುಮಾರ್ ತನ್ನ ಮದುವೆಗೆ ನಾಲ್ಕು ದಿನಗಳು ಬಾಕಿ ಇರುವ ಸಮಯದಲ್ಲಿ ಆತನ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯೂನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಆತನ ಪ್ಲೇಟ್ಲೆಟ್ಗಳು ಸಹ 10 ಸಾವಿರಕ್ಕಿಂತ ಕಡಿಮೆ ಇದ್ದವು ಮತ್ತು ಇದು ಅವರ ಜೀವಕ್ಕೆ ಅಪಾಯವನ್ನುಂಟು ಮಾಡಿತ್ತು.
ಬಳಿಕ ವರ ಅವಿನಾಶ್ ತಂದೆ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದು, ಇದಕ್ಕೆ ವಧುವಿನ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಗದಿಯಾಗಿರುವ ಮುಹೂರ್ತದಲ್ಲೇ ಮದುವೆ ಮಾಡಬೇಕು ಎಂದು ವಧುವಿನ ಕಡೆಯವರು ಪಟ್ಟು ಹಿಡಿದಿದ್ದು, ಬಳಿಕ ಆಸ್ಪತ್ರೆಯ ಹಾಲ್ನಲ್ಲಿ ಮದುವೆಯನ್ನು ಸರಳವಾಗಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.
ವರ ಅವಿನಾಶ್ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಮತ್ತು ನವದಂಪತಿಗಳಿಗೆ ಮತ್ತೊಮ್ಮೆ ಸಿಬ್ಬಂದಿ ವತಿಯಿಂದ ಶುಭ ಹಾರೈಸಲಾಗುವುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.