ಬೆಂಗಳೂರಿಗೆ ವಿದೇಶಿ 'ಗ್ರೀನ್ ಎಸ್‌ಎಂ' ಇ-ಟ್ಯಾಕ್ಸಿ ಎಂಟ್ರಿ 
ನ್ಯೂಸ್

ಬೆಂಗಳೂರಿನಲ್ಲಿ 'ಗ್ರೀನ್ ಎಸ್‌ಎಂ' ಕ್ಯಾಬ್ ಕಿರಿಕ್: ವಿದೇಶಿ ಎಲೆಕ್ಟ್ರಿಕ್ ಕಾರುಗಳ ವಿರುದ್ಧ ಚಾಲಕರ ಯುದ್ಧ! | Green SM EV Taxi

ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ಮೂಲದ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆ ಶುರುವಾಗುತ್ತಿದ್ದು, ಇದನ್ನು ಸ್ಥಳೀಯ ಚಾಲಕ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ. ವಿಯೆಟ್ನಾಂ ಮೂಲದ 'ವಿನ್‌ಗ್ರೂಪ್' ಕಂಪನಿಗೆ ಸೇರಿದ 'ಗ್ರೀನ್ ಎಸ್‌ಎಂ' ಇ-ಟ್ಯಾಕ್ಸಿಗೆ ಕರ್ನಾಟಕ ಸಾರಿಗೆ ಇಲಾಖೆಯು ಪರವಾನಗಿ ಕೊಟ್ಟಿದ್ದು, ಇದು ನಮ್ಮ ಆದಾಯಕ್ಕೆ ಕಲ್ಲು ಹಾಕುತ್ತದೆ ಎಂದು ಸ್ಥಳೀಯ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

ಕೆಂಗೇರಿ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸದ್ದಿಲ್ಲದೆ ಪ್ರತ್ಯಕ್ಷವಾದ ನೂರಾರು ನೀಲಿ ಬಣ್ಣದ 'ಗ್ರೀನ್ ಎಸ್‌ಎಂ' ಕಾರುಗಳು ಸ್ಥಳೀಯ ಚಾಲಕರ ನಿದ್ದೆಗೆಡಿಸಿದ್ದವು. ಈ ವಿದೇಶಿ ಇ-ಕ್ಯಾಬ್‌ಗಳು ರಸ್ತೆಗಿಳಿಯಲು ಸಿದ್ಧವಾಗುತ್ತಿದ್ದಂತೆ ಕಣ್ಣು ಕೆಂಪು ಮಾಡಿದ 'ಕರ್ನಾಟಕ ರಾಜ್ಯ ಚಾಲಕರ ಪರಿಷತ್' ಹಾಗೂ 'ಪೀಸ್ ಆಟೋ ಯೂನಿಯನ್' ಒಕ್ಕೂಟಗಳು, ಸರ್ಕಾರದ ವಿರುದ್ಧ ಸಮರ ಸಾರಿ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದವು.

ಕರ್ನಾಟಕ ಸಾರಿಗೆ ಇಲಾಖೆಯು ಗ್ರೀನ್ ಎಸ್‌ಎಂ ಕಂಪನಿಗೆ 2031ರವರೆಗೆ ಲೈಸೆನ್ಸ್ ಮಂಜೂರು ಮಾಡಿದೆ. ಇತರ ನಗರಗಳಲ್ಲಿ ಪ್ರತಿ ಕಿಲೋಮೀಟರ್‌ಗೆ ಕೇವಲ 8ರೂ. ರಂತೆ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವುದು ಸ್ಥಳೀಯ ಚಾಲಕರಲ್ಲಿ ತೀವ್ರ ಆತಂಕ ತಂದೊಡ್ಡಿದೆ.

ಓಲಾ, ಉಬರ್, ರ‍್ಯಾಪಿಡೋ ಹಾಗೂ ನಮ್ಮ ಯಾತ್ರಿಯಂತಹ ಆ್ಯಪ್‌ ಆಧಾರಿತ ಸಂಸ್ಥೆಗಳಿಂದ ಸ್ಥಳೀಯ ಚಾಲಕರು ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ವಿದೇಶಿ ಕಂಪನಿಯೊಂದು ಕಮ್ಮಿ ದರಕ್ಕೆ ಸೇವೆ ನೀಡಿದರೆ ತಮ್ಮ ದಿನನಿತ್ಯದ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ: ನಾಳೆಯಿಂದ ಅಮುಲ್ ಹಾಲಿನ ದರ ಲೀಟರ್‌ಗೆ ರೂ. 4 ರವರೆಗೆ ಜಿಗಿತ! | Milk Price Hike

ನಿಯಮಗಳ ಪ್ರಕಾರ ಇ-ಟ್ಯಾಕ್ಸಿಗಳಿಗೆ ಫೇರ್ ಮೀಟರ್, ಡಿಸ್‌ಪ್ಲೇ ಬೋರ್ಡ್ ಹಾಗೂ ಜಿಪಿಎಸ್ ಕಡ್ಡಾಯವಾಗಿದೆ. ಆದರೆ, ಗ್ರೀನ್ ಎಸ್‌ಎಂ ಕಾರುಗಳಿಗೆ ಈ ಯಾವುದೇ ವ್ಯವಸ್ಥೆಯನ್ನು ತಪಾಸಣೆ ಮಾಡದೆ ಸಾರಿಗೆ ಇಲಾಖೆ ಅವಸರದಲ್ಲಿ ಲೈಸೆನ್ಸ್ ನೀಡಿದೆ ಎಂದು ಒಕ್ಕೂಟಗಳು ಆರೋಪಿಸಿವೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸ್ಥಳೀಯ ಚಾಲಕರ ಹಿತ ಕಾಯಲು ಈ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಚಾಲಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.