StartFragment Delhi: ದೆಹಲಿಯಲ್ಲಿ ಜನರಿಂದಲೇ ಆಯ್ಕೆಯಾದ ಸರ್ಕಾರವೇ ಈ ಬಾರಿ ಪಟಾಕಿ ಬಳಕೆ ಮಾಡಲು ಅನುಮತಿಸಿದೆ. ಹೀಗಾಗಿ ದೆಹಲಿ ಜನರು ಈ ವರ್ಷ ಕಲುಷಿತ ಗಾಳಿಯ ಗುಣಮಟ್ಟದ ಬಗ್ಗೆ ದೂರು ನೀಡಬೇಡಿ ಎಂದು ಬುಧವಾರ(ಅ.15) ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ( Mahua Moitra) ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಮಹುವಾ, ದೆಹಲಿಯ ಜನರು ಈ ಸರ್ಕಾರವನ್ನು ಬಯಸಿದ್ದರು. ಸರ್ಕಾರ ಜನರಿಗೆ ಪಟಾಕಿಗಳನ್ನು ನೀಡಬೇಕೆಂದು ಬಯಸಿತ್ತು. ಪ್ರತಿಯೊಬ್ಬರೂ ಈಗ ಬಯಸಿದ್ದನ್ನು ಪಡೆದಿದ್ದಾರೆ. ದಯವಿಟ್ಟು ಈ ವರ್ಷ ಗಾಳಿಯ ಗುಣಮಟ್ಟದ ಬಗ್ಗೆ ಕೊರಗುತ್ತಾ ಸಮಯ ವ್ಯರ್ಥ ಮಾಡಬೇಡಿ ಎಂದು ಬರೆದಿದ್ದಾರೆ.
ಅ. 18ರಿಂದ 21ರವರೆಗೆ ದೆಹಲಿಯಲ್ಲಿ ಹಸಿರು ಪಟಾಕಿಗಳನ್ನು ಬಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. NEERI ಅನುಮೋದಿತ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಹಾಗೆಯೇ ಪಟಾಕಿ ತಯಾರಕರು ಹಸಿರು ಮಾನದಂಡಗಳನ್ನು ಅನುಸರಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಸೂಚಿಸಿತ್ತು.
ಇನ್ನೂ ಹಸಿರು ಪಟಾಕಿ ಬಳಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದನ್ನು ಸ್ವಾಗತಿಸಿದ್ದ ದೆಹಲಿ ಸಿಎಂ ರೇಖಾ ಗುಪ್ತಾ, ಇದು ಜನರ ಭಾವನೆಗಳನ್ನು ಗೌರವಿಸುತ್ತದೆ. ಸಂಪ್ರದಾಯಗಳು ಮತ್ತು ಪರಿಸರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ಆದೇಶ ಹೊರಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳನ್ನು ಹೇಳಿದ್ದರು. (ಏಜೆನ್ಸೀಸ್)