ನ್ಯೂಸ್

ಮದ್ಯಪಾನಕ್ಕಾಗಿ ಹಣ ಕೊಡ್ಲಿಲ್ಲ ಅಂತ ಅಜ್ಜ-ಅಜ್ಜಿಯನ್ನೇ ಕೊಂದ; ಶವ ಕೊಳೆತ ಮೇಲೇ ಗೊತ್ತಾಗಿದ್ದು!

ನವದೆಹಲಿ: ಮದ್ಯವನ್ನು ಖರೀದಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಅಜ್ಜ-ಅಜ್ಜಿಯನ್ನೇ ಕೊಲೆ ಮಾಡಿದ್ದು, ಇದೀಗ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಇಬ್ಬರ ಶವವೂ ಕೊಳೆತು ನಾರಲಾರಂಭಿಸಿದ ಮೇಲೆಯೇ ಕೊಲೆಯ ವಿಷಯ ಗೊತ್ತಾಗಿದ್ದು.

ಉತ್ತರಪ್ರದೇಶದ ಬುಡೌನ್ ಜಿಲ್ಲೆಯ ದಮ್ರಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಹಿಮೇಶ್ (20) ಕೊಲೆ ಆರೋಪಿ. ಪ್ರೇಮ್​ಶಂಕರ್​ (65) ಮತ್ತು ಭಾವನಾ ದೇವಿ (60) ಮೊಮ್ಮಗನಿಂದ ಕೊಲೆಗೀಡಾದ ಅಜ್ಜ-ಅಜ್ಜಿ. ಈ ಕುಟುಂಬ ದೆಹಲಿಯಲ್ಲಿ ವಾಸವಿದ್ದು, ಮದುವೆಯೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ತರಪ್ರದೇಶಕ್ಕೆ ಬಂದಿತ್ತು.

ಹಿಮೇಶ್ ಮದ್ಯವ್ಯಸನಿಯಾಗಿದ್ದು, ಮದ್ಯವನ್ನು ಖರೀದಿಸಲು ಸಂಬಂಧಿಕರು ಹಾಗೂ ಮನೆಯವರನ್ನು ಪೀಡಿಸುತ್ತಿದ್ದ. ಈ ಸಲವೂ ಮನೆಯವರನ್ನು ಕೇಳಿದ್ದಾಗ ಅವರು ಬೈದಿದ್ದರು. ಇದೇ ಸಿಟ್ಟಲ್ಲಿ ಈತ ಅಜ್ಜ-ಅಜ್ಜಿಯನ್ನು ಕೊಲೆ ಮಾಡಿ, ಇಬ್ಬರ ಶವವನ್ನು ಮನೆಯಲ್ಲಿನ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಅಡಗಿಸಿಟ್ಟಿದ್ದ.

ಈ ಕೊಲೆ ಜೂ. 22ರಂದು ನಡೆದಿದ್ದು, ಮನೆಯವರು ಭಾನುವಾರ ದೂರು ನೀಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.