ನ್ಯೂಸ್

ತುಮಕೂರಲ್ಲಿ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ: ಸಿದ್ಧಗಂಗಾ ಮಠಕ್ಕೆ ಎಚ್​ಡಿಕೆ ಭೇಟಿ

ತುಮಕೂರು: ಜೆಡಿಎಸ್​ನ ಪಂಚರತ್ನ ರಥಯಾತ್ರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯಶಸ್ವಿ ಯಾತ್ರೆ ಮುಗಿಸಿದ ಖುಷಿಯೊಂದಿಗೆ ಜೆಡಿಎಸ್​ನ ಪಂಚರತ್ನ ರಥಯಾತ್ರೆಯು ಇಂದು(ಗುರುವಾರ) ತುಮಕೂರು ಪ್ರವೇಶಿಸಿದೆ. ಪಂಚರತ್ನ ರಥಯಾತ್ರೆಗೆ ತುಮಕೂರು ನಗರದಾದ್ಯಂತ ಅದ್ದೂರಿ ಸ್ವಾಗತ ಸಿಕ್ಕಿದೆ.

ತುಮಕೂರು ನಗರ ಕ್ಷೇತ್ರದಲ್ಲಿ ರಥಯಾತ್ರೆ ಪ್ರಾರಂಭಿಸುವ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿದ ಎಚ್​ಡಿಕೆ, ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಶುಭಘಳಿಗೆ, ಶುಭಮಹೂರ್ತದಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರಕ್ಕೆ 11 ಕ್ಷೇತ್ರವನ್ನೂ ಗೆಲ್ಲುವ ವಿಶ್ವಾಸವಿದೆ. ಅತಂತ್ರ ಪರಿಸ್ಥಿತಿ ಉದ್ಭವಿಸಲ್ಲ. ಬಿಜೆಪಿ ಮತ್ತು ಕಾಂಗ್ರೆಸ್​ನ ಸಹವಾಸ ಮಾಡೋಲ್ಲ. ಸ್ವತಂತ್ರ ಬಲದಿಂದ ಸರ್ಕಾರ ರಚನೆ ಮಾಡ್ತೀವಿ ಎಂದರು.

ಯಾವ ಪಕ್ಷದಲ್ಲಿ ಯಾರನ್ನು ಸೆರಿಸಿಕೊಳ್ಳುತ್ತಾರೆ, ಯಾರನ್ನು ಕಳುಹಿಸ್ತಾರೆ ಎಂಬುದು ನನಗೆ ಬೇಡದ ವಿಚಾರ. ನನ್ನ ಗುರಿ ಇರೋದು ಪಂಚರತ್ನ ಯಾತ್ರೆ ಮೂಲಕ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕೊಡೋದು. ತುಮಕೂರು ನಗರ ಕ್ಷೇತ್ರದಲ್ಲಿ ಜೆಡಿಎಸ್​ ಟಿಕೆಟ್ ಯಾರಿಗೆ ಎಂಬ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಗೋವಿಂದರಾಜು ಅವರು ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ‌. ಗೋವಿಂದರಾಜುಗೆ ಟಿಕೆಟ್ ಕೊಡೋದು ಕನ್ಫರ್ಮ್​ ಆಗಿದೆ. ಇದರ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಎಚ್​ಡಿಕೆ ಸ್ಪಷ್ಟಪಡಿಸಿದರು.