ಹರಿಯಾಣ: ಹರಿಯಾಣ ರಾಜ್ಯದ ಗುರುಗಾಂವ್ನಲ್ಲಿ ವಾಸವಾಗಿರುವ ಕನ್ನಡಿಗರು "ಗುರುಗಾಂವ್ ಕನ್ನಡ ಸಂಘವನ್ನು ಕಟ್ಟಿ" ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಅದೇ ತರಹ ಈ ವರ್ಷ 19-11-2023 ಭಾನುವಾರದಂದು ಗುರುಗಾಂವ್ ನಗರದ Excelsior American ಶಾಲೆಯ ಸಭಾಂಗಣದಲ್ಲಿ ಸುಮಾರು 320 ಕನ್ನಡಿಗರ ಮಧ್ಯೆ ರಾಜ್ಯೋತ್ಸವವನ್ನು ಆಚರಿಸಲಾಯಿತು.
ತುಂಬಿದ ಸಭಾಂಗಣಕ್ಕೆ ಮುಖ್ಯ ಅತಿಥಿಗಳನ್ನು ಅಧ್ಯಕ್ಷರು ಶ್ರೀ. ಕೃಷ್ಣಪ್ಪ .ಎಂ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಅವರು ಆದರದಿಂದ ಸ್ವಾಗತ ಮಾಡಿದರು. ಮುಖ್ಯ ಆತಿಥಿಗಳಾಗಿ ಶ್ರೀಮತಿ ವಂದನಾ ಗುರ್ನಾನಿ ಮೇಡಮ್ (IAS ಅಧಿಕಾರಿಗಳು ಕರ್ನಾಟಕ ಭವನ)ರಾಜಶೇಖರ ಸರ್ IAS ಅಧಿಕಾರಿಗಳು ನವದೆಹಲಿ ಮತ್ತು ಅಮರೇಶ್ ಪಾಟೀಲ್ ಸರ್ ( IRS ಅಧಿಕಾರಿಗಳು ) ಕೇಂದ್ರ ಮಂತ್ರಿಗಳ ಅಪ್ತ ಕಾರ್ಯದರ್ಶಿ ಭಾಗವಹಿಸಿ ಕಾರ್ಯಕ್ರಮದ ಹಿರಿಮೆಯನ್ನು ಹೆಚ್ಚಿಸಿದರು.
ಜೆ. ಸಂತೋಷ ಗೌಡ ಅವರು ಅತಿಥಿಗಳನ್ನು ಸ್ವಾಗತ ಭಾಷಣದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಿದರು. ಕಾರ್ಯಕ್ರಮಕ್ಕೆ ಚಾಲನೆಯನ್ನು ಮುಖ್ಯ ಅತಿಥಿಗಳು ಮತ್ತು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಸಿ.ಎಮ್ ನಾಗರಾಜ್ ಸರ್, ರೇಣುಕುಮಾರ್ ಸರ್, ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರು ಕೃಷ್ಣಪ್ಪ .ಎಂ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಅವರು ತಾಯಿ ಭುವನೇಶ್ವರಿ ಮಾತೆಯ ಪೋಟೋ ಗೆ ದೀಪ ಹಚ್ಚುವ ಮೂಲಕ ಅದ್ದೂರಿ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ನಾಗರಾಜ್ ಸರ್ ನೆರವೇರಿಸಿದರು.
ಭಾಷಣದಲ್ಲಿ ಉದ್ಘಾಟನಾ ಭಾಷಣದ ನಾಗರಾಜ್ ಸರ್ ಐಎಎಸ್ ಪರೀಕ್ಷೆ ಬರೆಯಲು ದೆಹಲಿಗೆ ಬರುವ ಕನ್ನಡಿಗರಿಗೆ ದೆಹಲಿ, ಗುರುಗಾಂವ್ ಅಥವಾ ನೋಯ್ಡಾದಲ್ಲಿ ಒಂದು ವಸತಿ ನಿಲಯ ಕಟ್ಟುವ ತಮ್ಮ ಭವಿಷ್ಯದ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ಮುಖ್ಯ ಅತಿಥಿಗಳು ಶ್ರೀಮತಿ ವಂದನಾ ಗುರ್ನಾನಿ ಮಾತನಾಡಿ ತಾವು ದೆಹಲಿಯಲ್ಲಿ ಹುಟ್ಟಿ ಯಾವ ತರಹ ಕನ್ನಡ ಕಲಿತರು ಮತ್ತು ದೆಹಲಿ ಸುತ್ತಮುತ್ತ ಕನ್ನಡ ಸಂಘ ಸಂಸ್ಥೆಗಳ ಬಗ್ಗೆ ತಮ್ಮ ಕೈಲಾದ ಸಹಾಯ ಮಾಡುವ ಭರವಸೆ ನೀಡಿದರು. ಹಿರಿಯ ಐಎಎಸ್ ಅಧಿಕಾರಿಗಳಾದ ಶ್ರೀ ರಾಜಶೇಖರ ಸರ್ ಮಾತನಾಡಿ ಹೊರನಾಡಿನಲ್ಲಿ ಕನ್ನಡ ಸಂಘವನ್ನು ಕಟ್ಟಿ ಈ ತರಹ ಕನ್ನಡ ಬೆಳೆಸುವ ಕಾರ್ಯವನ್ನು ಶ್ಲಾಘಿಸಿದರು.
ಇನ್ನೋರ್ವ ಅತಿಥಿ ಶ್ರೀ ಅಮರೇಶ್ ಪಾಟೀಲ್ ಸರ್ ಮಾತನಾಡಿ, ಕರ್ನಾಟಕದ ಉದಯದ ಬಗ್ಗೆ ಕನ್ನಡ ಭಾಷೆ ಬೆಳೆದ ಬಗ್ಗೆ ಮೈಸೂರು ಕರ್ನಾಟಕ ಹೇಗೆ ಅಯಿತು ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡರು. ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರೇಣು ಕುಮಾರ್ ಸರ್ ಮಾತನಾಡುತ್ತಾ ರಾಜ್ಯೋತ್ಸವದ ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಅವರನ್ನು ನೆನಪಿಸಿಕೊಳ್ಳುವು ಅಗತ್ಯ ಏಕೆಂದರೆ ಆಂಗ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದ ಅಭಿವೃದ್ಧಿಯನ್ನು ಅತ್ಯಂತ ವೇಗದಲ್ಲಿ ಮಾಡಿದರು ಆನಂತರ ಬಂದ ಕರ್ನಾಟಕ ರಾಜ್ಯ ಸರಕಾರಗಳು ಕನ್ನಡದ ಅಭಿವೃದ್ಧಿಗೆ ಬೇಕಾದಷ್ಟು ಕೆಲಸ ಮಾಡಿವೆ ಎಂದು ತಿಳಿಸಿದರು.
ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರು ಕೃಷ್ಣಪ್ಪ ಮಾತನಾಡುತ್ತಾ ಕರ್ನಾಟಕದ ಉದಯ ಯಾವ ರೀತಿಯಾಯಿತು, ಇದರ ಹಿಂದಿರುವ ಮಹಾನ್ ವ್ಯಕ್ತಿಗಳು ಅವರ ಕೊಡುಗೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಸ್ಥಳೀಯ ಮಕ್ಕಳು ಅದ್ಭುತವಾಗಿ ನೃತ್ಯ ಮಾಡಿದರು. ಪುರುಷ ಮತ್ತು ಮಹಿಳಾ ಗಾಯಕರು ಇಂಪಾಗಿ ಹಾಡಿದರು. ಗಣೇಶ ಉಪಾಧ್ಯಾಯ ಸರ್ ಅವರಿಗೆ ಗುರುಗಾಂವ್ ಕನ್ನಡ ಸಂಘಕ್ಕೆ ಅವರ ಸಲ್ಲಿಸಿದ ಸೇವೆಗೆ ಗುರುಗಾಂವ್ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿದರು. 10 ಮತ್ತು 12 ನೇಯ ತರಗತಿಯಲ್ಲಿ 90% ಅಧಿಕ ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರತಿಭೆ ಪುರಸ್ಕಾರ ನೀಡಿದರು.
ಕರ್ನಾಟಕದಿಂದ ಬಂದ ಓಷಿಯನ್ ಅರ್ಡ್ಸ್ ಬ್ರೇಕರ್ ಹಾಗೂ ರಮೇಶ್ ಮೇಸ್ತ ತಂಡ ಅಮೋಘವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಗಣೇಶ ಅವರ ಗಂಡು ಮತ್ತು ಹೆಣ್ಣಿನ ಧ್ವನಿಯಲ್ಲಿ ಹಾಡಿದ ಹಾಡುಗಳು ಪ್ರೇಕ್ಷಕರ ಮನೆಸೊರೆಗೊಂಡವು. ಡಬ್ಬಲ್ ಡೆಕ್ಕರ್ ನೃತ್ಯಗಾರ ಅಶೋಕ ಅವರು ಮಾಡಿದ ನೃತ್ಯಗಳು ಅದ್ವಿತೀಯವಾಗಿದ್ದವು. ಗುರುಗಾಂವ್ ಕನ್ನಡ ಸಂಘದ ಪ್ರಧಾನ ಕಾರ್ಯ ಚಂದ್ರಶೇಖರ ಜೋಳದರಾಶಿ ಸಭಾಂಗಣದಲ್ಲಿ ಸೇರಿದ ಪ್ರೇಕ್ಷಕರಿಗೆ ಹಾಗು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಈ ಕಾರ್ಯಕ್ರಮ ಯಶಸ್ವಿಯಾಗಲು ಗುರುಗಾಂವ್ ಕನ್ನಡ ಸಂಘದ ಖಜಾಂಚಿ ಮರಿಬಸಪ್ಪ ಎಂ, ಉಪಾಧ್ಯಕ್ಷರು ರಾಜಕುಮಾರ ನಿಲೂರ, ಶ್ರೀಮತಿ ಮಾಲ ರಮೇಶ್ ಜಂಟಿ ಕಾರ್ಯದರ್ಶಿ ಲಕ್ಷ್ಮಣ ಕಟ್ಟಿಮನಿ ಹಾಗು ಸದಸ್ಯರಾದ ಗೋಪಾಲ ತಲ್ವಾರ್, ಶರಣಬಸಪ್ಪ, ರಾಜಶೇಖರ ಪಾಟೀಲ್, ಚಂದ್ರಶೇಖರ .ಕೆ, ಗಿರೀಶ್ ಕುಲಕರ್ಣಿ, ಸಿದ್ದು ಸಾಹುಕಾರ್ ಅಪ್ಪಸಾಬ್ ಗೋಟೆ ಶ್ರೀಮತಿ ಸುನಂದಾ ದರ್ಗಾ, ಶ್ರೀಮತಿ ಭಾರತಿ ತಿಮ್ಮಪ್ಪ ಬಹಳ ಶ್ರಮಿಸಿದರು. ಗುರುಗಾಂವ್ ಕನ್ನಡ ಸಂಘ ಹಿಂದೆ ಬೆಳೆದು ಬಂದ ರೀತಿಯನ್ನು ನೆನಪಿಸಿಕೊಂಡು ಸಂಘಕ್ಕೆ ಬರುವ ಎಲ್ಲಾ ಕನ್ನಡಿಗರಿಗೆ ವಂದನೆಗಳು. ಮಲಬಾರ್ ಗೊಲ್ಡ್ ಪ್ರಾಯೋಜಿಸದ ಲಕ್ಕಿ ಡಿಪ್ ಡ್ರಾ ಕಾರ್ಯಕ್ರಮದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಪನ್ನವಾಗಿ ಮುಕ್ತಾಯಗೊಳಿಸಲಾಯಿತು.