ನ್ಯೂಸ್

ಆಧಾರ್​ ತಿದ್ದುಪಡಿ ಮಾಡಿ ಅಪ್ರಾಪ್ತ ವಯಸ್ಕಳೊಂದಿಗೆ ಅದ್ಧೂರಿ ಮದ್ವೆ: ಸಂಕಷ್ಟಕ್ಕೆ ಸಿಲುಕಿದ ಗ್ರಾ.ಪಂ ಉಪಾಧ್ಯಕ್ಷ

ಮೈಸೂರು: ಆಧಾರ್​ ತಿದ್ದುಪಡಿ ಮಾಡಿ ಅಪ್ರಾಪ್ತೆಯನ್ನು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿರುವ ಆರೋಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ವಿರುದ್ಧ ಕೇಳಿಬಂದಿದೆ. ಈ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಹಾಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕುಮಾರ್ ಎಂಬುವರ ವಿರುದ್ಧ ಆರೋಪ ಕೇಳಿಬಂದಿದೆ. ಹರೀಶ್ ಅರಿಯೂರು ಗ್ರಾಮದ ನಿವಾಸಿ. ಅವರ ಗ್ರಾಮಸ್ಥರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ಹರೀಶ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಆಧಾರ್ ಕಾರ್ಡ್​ನಲ್ಲಿನ ಹುಟ್ಟಿದ ದಿನಾಂಕವನ್ನು ತಿದ್ದುಪಡಿ ಮಾಡಿ ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡಿದ್ದಾನೆ ಎಂದು ಅರಿಯೂರು ಗ್ರಾಮಸ್ಥರು ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಶಾಲಾ ದಾಖಾಲಾತಿಯನ್ನು ಸಾಕ್ಷಿಯಾಗಿ ನೀಡಿದ್ದು, ಅದರ ಪ್ರಕಾರ ವಧುವಿಗೆ ಇನ್ನೂ 18 ವರ್ಷ ಕೂಡ ತುಂಬಿಲ್ಲ. ಆದರೆ, ಆಧಾರ್​ ಕಾರ್ಡ್​ ತಿದ್ದುಪಡಿ ಮೂಲಕ ವಯಸ್ಸನ್ನು ಮರೆಮಾಚಿ ಮದುವೆ ಮಾಡಿಕೊಂಡಿದ್ದಾರೆ ಎಂದು ಹರೀಶ್​ ವಿರುದ್ಧ ಆರೋಪ ಮಾಡಲಾಗಿದೆ.

ಕಳೆದ ಫೆ. 15ರಂದು ನಂಜನಗೂಡಿನಲ್ಲಿ ಅದ್ಧೂರಿ ವಿವಾಹ ನೆರವೇರಿತು. ಅಂದಿನಿಂದ ಗ್ರಾಮಸ್ಥರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಯು ಸಹ ಕಾಡುತ್ತಿದೆ. ಮದುವೆಯಾಗಿ 7 ತಿಂಗಳು ಕಳೆದ ಬಳಿಕ ಹರೀಶ್​ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಪ್ರಾಪ್ತೆಯನ್ನು ಮದುವೆ ಆಗುವ ಮೂಲಕ ಉಪಾಧ್ಯಕ್ಷ ಹರೀಶ್​ ಕುಮಾರ್​ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.