More

  ಆತ್ಮೀಯತೆಯ ಅವಲೋಕನ: ಯಾರು ಆಪ್ತರು, ಯಾರು ಅತ್ಯಾಪ್ತರು?

  ಜೀವನದಲ್ಲಿ ಬಹಳ ಜನರನ್ನು ಭೇಟಿ ಮಾಡುತ್ತೇವೆ. ಅವರಲ್ಲಿ ಕೆಲವರು ಸ್ನೇಹಿತರಾಗುತ್ತಾರೆ, ಕೆಲವರು ಆತ್ಮೀಯರಾಗುತ್ತಾರೆ. ಕೆಲವರಿಗೆ ಹೆಚ್ಚು ಸ್ನೇಹಿತರಿರುತ್ತಾರೆ, ಇನ್ನು ಕೆಲವರಿಗೆ ಕಡಿಮೆ. ಹಾಗೆಯೇ ಎಲ್ಲ ಸ್ನೇಹಿತರೂ ಆಪ್ತರಾಗಿರುವುದಿಲ್ಲ, ಎಲ್ಲರೂ ಆತ್ಮೀಯರಾಗಿರುವುದಿಲ್ಲ. ಈ ಆಪ್ತತೆ-ಆತ್ಮೀಯತೆ ಕುರಿತಂತೆ ಇದೊಂದು ಅವಲೋಕನಾತ್ಮಕ ಬರಹ.

  | ಎನ್​.ಗುರುನಾಗನಂದನ
  ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಕೆಲವರು ಎಲ್ಲ ಪೋಸ್ಟ್​ಗಳನ್ನು ನೋಡುತ್ತಾರೆ, ಲೈಕ್ ಕೂಡ ಮಾಡುತ್ತಾರೆ. ಆದರೆ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ. ಇದಕ್ಕೆ ಮುಜುಗರ, ನಾಚಿಕೆ ಮುಂತಾದ ಹಲವಾರು ಕಾರಣಗಳಿರಬಹುದು. ಆದರೆ ಇದು ಸಾಮಾಜಿಕ ಜಾಲತಾಣಕ್ಕೆ ಸೀಮಿತವಲ್ಲ. ಕೆಲವು ಸ್ನೇಹಿತರು ಸುಖ-ದುಃಖ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಅದಕ್ಕೆ ಸ್ಪಂದಿಸುತ್ತಾರೆ ಕೂಡ. ಆದರೆ ಅವರ ಜೀವನದಲ್ಲಿ ಏನಾಗುತ್ತಿದೆ ಎಂದು ಹೇಳಿಕೊಳ್ಳುವುದಿಲ್ಲ. ಎಲ್ಲರೊಂದಿಗೆ ಆತ್ಮೀಯವಾಗಿರುತ್ತಾರೆ. ಆದರೆ ಸ್ನೇಹಿತ ಎಂದು ಭಾವಿಸುವುದಿಲ್ಲ. ಬಹಿಮುಖಿಗಳಲ್ಲಿ ಈ ರೀತಿಯ ನಡವಳಿಕೆಯನ್ನು ಕಾಣಬಹುದು. ಅವರು ಹಲವಾರು ಜನರೊಂದಿಗೆ ಮಾತನಾಡಿದಾಗ ಒಬ್ಬೊಬ್ಬರ ವರ್ತನೆ ವಿಭಿನ್ನವಾಗಿರುತ್ತೆ. ಯಾರನ್ನು ನಂಬಬೇಕು, ನಂಬಬಾರದು ಎಂಬ ಗೊಂದಲವಿರುತ್ತೆ. ಇದರಿಂದ ಎಲ್ಲರೊಂದಿಗೆ ಚೆನ್ನಾಗಿದ್ದರೂ ಆತ್ಮೀಯರು ಯಾರು ಎಂಬ ಪ್ರಶ್ನೆ ಅವರಲ್ಲಿ ಕಾಡುತ್ತಿರುತ್ತದೆ. ಈ ನಡವಳಿಕೆಯನ್ನು ಅಂತಮುಖಿಗಳಲ್ಲೂ ಕಾಣಬಹುದು. ಆದರೆ ಅವರಿಗೆ ಸ್ನೇಹಿತರು ಬೇಕೇ ಬೇಕು, ಯಾವಾಗಲೂ ಜನರೊಂದಿಗೆ ಇರಬೇಕು ಎಂಬ ಅನಿವಾರ್ಯತೆ ಇಲ್ಲ. ಅವರು ಇದ್ದವರಲ್ಲೇ ಇದ್ದಷ್ಟಕ್ಕೆ ತೃಪ್ತಿ ಪಡುತ್ತಾರೆ. ಆದರೆ ಸ್ನೇಹ ಎಂಬುದು ಪ್ರತಿಯೊಬ್ಬರಿಗೂ ಅನಿವಾರ್ಯ. ಯಾವುದೇ ವ್ಯಕ್ತಿತ್ವ ಗುಣಲಕ್ಷಣವಿದ್ದರೂ ಭಾವನಾತ್ಮಕ ಸಂಬಂಧ ಅಗತ್ಯ.

  ಆತ್ಮೀಯರು ಯಾರು ಎಂಬ ಅರಿವಿರಲಿ

  ಬಹಿಮುಖಿಗಳು ಹತ್ತಾರು ಜನರ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಜನರ ಜತೆ ಮಾತನಾಡದೆ ಬದುಕಲು ಸಾಧ್ಯವಿಲ್ಲ. ಆದರೆ ಭಾವನಾತ್ಮಕ ಸಂಬಂಧ ಬೆಳೆಸಲು ಕಷ್ಟ ಪಡುತ್ತಾರೆ. ಒಬ್ಬರನ್ನು ಭೇಟಿ ಮಾಡಿದ ತಕ್ಷಣ ಮನಸ್ಸು ಬಿಚ್ಚಿ ಆತ್ಮೀಯವಾಗಿ ಮಾತನಾಡುವುದು ಕಷ್ಟ. ಸಮಯ ಕಳೆದಂತೆ ಆತ್ಮೀಯತೆ ಹೆಚ್ಚಾಗಿ ಸ್ನೇಹ ಬೆಳೆಯುತ್ತದೆ. ಬಹಿಮುಖಿಗಳು ಹೆಚ್ಚು ಜನರೊಂದಿಗೆ ಮಾತಾಡುವುದುರಿಂದ ಯಾರನ್ನೂ ಸ್ನೇಹಿತರಾಗಿ ಆಯ್ಕೆ ಮಾಡಲು ಆಗುವುದಿಲ್ಲ. ಪರಿಚಯಸ್ಥರಿಂದ ಸ್ನೇಹಿತನ ಹಂತ ತಲುಪುವಲ್ಲಿ ಕಷ್ಟ ಪಡುತ್ತಾರೆ. ಇದರಿಂದ ತೊಂದರೆಗಳಾಗುವ ಸಾಧ್ಯತೆ ಹೆಚ್ಚು. ದುಃಖವಾದಾಗ ಯಾರ ಬಳಿ ಮಾತಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ. ಪರಿಚಯಸ್ಥರ ಬಳಿ ಹಂಚಿಕೊಂಡರೆ ಅವರಿಂದ ಏನಾದರೂ ಆಪತ್ತು ಸಂಭವಿಸುತ್ತಾ? ಎಂಬ ಅಸುರಕ್ಷಿತ ಭಾವನೆ ಇರುತ್ತದೆ. ಯಾರಿಗೆ ಯಾವ ವಿಷಯ ಹೇಳಬೇಕು ಅಥವಾ ಯಾವ ವಿಷಯ ಹೇಳಿದ್ದೇನೆ ಎಂಬುದು ತಿಳಿಯದೆ ಹೋಗುತ್ತದೆ. ಎಲ್ಲರೊಂದಿಗೆ ಇದ್ದರೂ ಒಂಟಿಯಾಗಿರುತ್ತಾರೆ. ಎಲ್ಲ ಬಹಿಮುಖಿಗಳು ಹೀಗೆ ಎಂದು ಹೇಳುತ್ತಿಲ್ಲ. ಕೆಲವರು ನೂರು ಜನರೊಂದಿಗೆ ಮಾತಾಡಿದರೂ ತಮ್ಮ ಕ್ಲೋಸ್ ಸರ್ಕಲ್ ಯಾವುದು ಎಂಬ ಅರಿವು ಇರುತ್ತದೆ. ಇದನ್ನು ಸರಿಯಾಗಿ ಆಯ್ಕೆ ಮಾಡಬೇಕು. ಒಳ್ಳೆಯ ಗುಣಮಟ್ಟದ ಸ್ನೇಹ ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸುತ್ತದೆ. ನಮಗೆ ಯಾರು ಹಿತ ಎಂಬುದನ್ನು ತಿಳಿದು ಆರಿಸಿಕೊಳ್ಳಬೇಕು. ಇದರೊಂದಿಗೆ ಆತ್ಮೀಯ ಸ್ನೇಹಿತರು ಎಂದು ನಿರ್ಧರಿಸುವಾಗ ಅವರ ಆಲೋಚನೆಗಳು ಬೇರೆಯಾಗಿದ್ದಲ್ಲಿ ಅದನ್ನು ಗೌರವಿಸಬೇಕೇ ಹೊರತು ಅಷ್ಟಕ್ಕೇ ತಿರಸ್ಕರಿಸಬಾರದು.

  ಗೆಳೆತನವಿಲ್ಲದೆ ಬದುಕಬಹುದೇ?

  ಕೆಲವರಿಗೆ ಸ್ನೇಹಿತರ ಅವಶ್ಯಕತೆ ಇರುವುದಿಲ್ಲ. ಅಂದರೆ ಅವರು ಮೇಲ್ನೋಟಕ್ಕೆ ಫ್ರೆಂಡ್ಸ್ ರೀತಿ ಮಾತನಾಡುತ್ತಾರೆ. ಆದರೆ ಅವರಿಗೆ ನೈಜ ಗೆಳೆತನದ ಅಗತ್ಯವಿರುವುದಿಲ್ಲ. ಅವರಿಗೆ ಕೇವಲ ಸಾಮಾಜಿಕ ಸಂಪರ್ಕದ ಅವಶ್ಯಕತೆ ಇರುತ್ತದೆ. ಯಾವುದೇ ಬಾಂಧವ್ಯ ಬೇಕಿರುವುದಿಲ್ಲ. ಇದು ತಪ್ಪಲ್ಲ, ಇದೊಂದು ರೀತಿಯ ವ್ಯಕ್ತಿತ್ವ. ಇದರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜನರೊಂದಿಗೆ ಮಾತನಾಡು ವುದರಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು.

  ಸ್ನೇಹ ಹೆಚ್ಚಾದರೆ ಅಪಾಯ!

  ಎಷ್ಟೇ ಜನ ಸ್ನೇಹಿತರಿದ್ದರೂ ಎಷ್ಟರಮಟ್ಟಿಗೆ ಭಾವನಾತ್ಮಕ ಸಂಪರ್ಕ ಹೊಂದಿದ್ದೇವೆ ಎಂಬುದು ಮುಖ್ಯ. ಭಾವನಾತ್ಮಕ ಬೆಂಬಲ ಭಾವನಾತ್ಮಕ ಅವಲಂಬನೆ ಆಗಬಾರದು. ಸಿನಿಮಾಗಳಲ್ಲಿ ತೋರಿಸುವಂತೆ ಒಬ್ಬ ಸ್ನೇಹಿತ ಎಲ್ಲ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ಭ್ರಮೆಯಿಂದ ದೂರವಾಗಬೇಕು. ಸ್ನೇಹಿತನ ಕಷ್ಟದಲ್ಲಿ ಜತೆಗಿರಬೇಕು, ಆದರೆ ಅದು ಹೊಣೆಗಾರಿಕೆ ಆಗಬಾರದು. ಸ್ನೇಹಿತನೊಂದಿಗೆ ಕಾಲ ಕಳೆಯಬೇಕು ಎಂಬ ಅಪೇಕ್ಷೆ ಇರಬೇಕು. ಆದರೆ ಅವನು/ಅವಳು ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಭಾವನೆ ಬಾರದಂತೆ ನೋಡಿಕೊಳ್ಳಬೇಕು. ಆಗಷ್ಟೇ ಸ್ನೇಹ ಆರೋಗ್ಯಕರ.

  ಸ್ನೇಹಿತರ ಸಂಖ್ಯೆ ಇದರ ಮೇಲೆ ಅವಲಂಬಿತ!

  ನಿಜವಾದ ಸ್ನೇಹಿತರು ಯಾರು ಎಂಬ ಅರಿವಿರಬೇಕು. ಆದರೆ ಕ್ಲೋಸ್ ಸರ್ಕಲ್ ಮಟ್ಟ ಎಷ್ಟು ಎಂಬುದು ಮುಖ್ಯ. ಉದಾಹರಣೆಗೆ ಚಿಕ್ಕ ವಯಸ್ಸಿನಿಂದ ಹತ್ತು ಗೆಳೆಯರು ಒಟ್ಟಿಗೆ ಬೆಳೆದಿರುತ್ತಾರೆ. ದೊಡ್ಡವರಾದ ಮೇಲೂ ಚೆನ್ನಾಗಿ ಮಾತಾಡಿಕೊಂಡು ಇರುತ್ತಾರೆ. ಒಮ್ಮೆ ಒಂದು ಪ್ರಮುಖ ಘಟನೆಯನ್ನು ಒಬ್ಬ ಗೆಳೆಯನಿಗೆ ಹೇಳುತ್ತಾನೆ, ಅವನು ಮತ್ತೊಬ್ಬನಿಗೆ ಹೇಳುತ್ತಾನೆ. ಆದನ್ನು ಕೇಳಿಸಿಕೊಂಡ ಗೆಳೆಯನಿಗೆ ಇದನ್ನು ನನಗೆ ಯಾಕೆ ಮೊದಲು ಹೇಳಲಿಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ. ನನಗಿಂತ ಅವನು ಹೆಚ್ಚು ಎಂಬ ಭಾವನೆ ಬರುತ್ತದೆ. ಇದರಿಂದ ಜಗಳ ಕೂಡ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ ಎಲ್ಲ ಹತ್ತು ಜನ ಗೆಳೆಯರೂ ಸಮಾನ ಆದ್ಯತೆಯವರಾಗಿ ಇರುತ್ತಾರೆ. ಆದರೆ ಅದನ್ನು ಅರ್ಥ ಮಾಡಿಸುವುದು ಕಷ್ಟ. ಹೀಗಾಗಿ ಕ್ಲೋಸ್ ಸರ್ಕಲ್ ಕಡಿಮೆ ಇದ್ದಷ್ಟೂ ಒಳ್ಳೆಯದು. ಕಡಿಮೆ ಎಂದರೆ ಎಷ್ಟು, ಎಷ್ಟು ಜನ ಆತ್ಮೀಯ ಸ್ನೇಹಿತರಿರಬೇಕು ಎಂಬ ಪ್ರಶ್ನೆಗಳು ಹುಟ್ಟುತ್ತದೆ. ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿ 150 ಜನರೊಂದಿಗೆ ಅರ್ಥಪೂರ್ಣ ಸಾಮಾಜಿಕ ಸಂಬಂಧ ಹೊಂದುವಷ್ಟು ಕಾಗ್ನಿಟಿವ್ ಸಾಮರ್ಥ್ಯ ಮನುಷ್ಯ ಹೊಂದಿದ್ದಾನೆ ಎಂದು ವಿಕಸನೀಯ ಮನಶಾಸ್ತ್ರಜ್ಞ ರಾಬಿನ್ ಡನ್ಬರ್ನ್ ಅಧ್ಯಯನ ತಿಳಿಸುತ್ತದೆ. ಎಷ್ಟು ಜನ ಆತ್ಮೀಯ ಸ್ನೇಹಿತನ ಹಂತ ತಲುಪುತ್ತಾರೆ? ಇಷ್ಟೇ ಸ್ನೇಹಿತರಿರಬೇಕು ಎಂದು ನಿಖರವಾದ ಸಂಖ್ಯೆ ಹೇಳುವುದು ಅಸಾಧ್ಯ. ಒಂಟಿತನದಿಂದ ಒದ್ದಾಡುತ್ತಿದ್ದವನಿಗೆ ಒಬ್ಬನ ಆಸರೆ ಸಿಕ್ಕರೂ ಸಂತೋಷವಾಗುತ್ತದೆ. ಒಬ್ಬ ಬಹಿಮುಖಿಗೆ ಹತ್ತು ಆತ್ಮೀಯ ಸ್ನೇಹಿತರಿದ್ದರೂ ಸಾಲದು. ಎಷ್ಟು ಸ್ನೇಹಿತರ ಅವಶ್ಯಕತೆ ಇದೆ ಮತ್ತು ಎಷ್ಟು ಜನ ಸ್ನೇಹಿತರನ್ನು ನಿಭಾಯಿಸುವ ಶಕ್ತಿ ಇದೆ ಎಂಬುದರ ಮೇಲೆ ಎಷ್ಟು ಸ್ನೇಹಿತರಿರಬೇಕು ಎಂಬುದು ನಿರ್ಧಾರವಾಗುತ್ತದೆ.

  ಗೆಳೆತನ ಉಳಿಸಿಕೊಳ್ಳುವುದು ಮಹತ್ವದ್ದು…!

  ಸ್ನೇಹದಲ್ಲಿ ಹಲವಾರು ವಿಧಗಳಿವೆ. ಸ್ನೇಹಿತ ಯಾಕೆ ಬೇಕು ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಎಲ್ಲರೂ ಆತ್ಮೀಯ ಸ್ನೇಹಿತರಾಗಲು ಸಾಧ್ಯವಿಲ್ಲ. ನಮಗೆ ನೂರು ಜನ ಪರಿಚಯಸ್ಥರಿದ್ದರೆ ಅದರಲ್ಲಿ ಕೆಲವರೊಂದಿಗೆ ಕಾಫಿ ಕುಡಿಯಲು ಹೋಗುತ್ತೇವೆ, ಕೆಲವರನ್ನು ಮನೆಗೆ ಕರೆದು ಜತೆಯಲ್ಲಿ ಕೂತು ಊಟ ಮಾಡುತ್ತೇವೆ. ಸ್ನೇಹಿತನ ಜತೆ ಪರಿಚಯಸ್ಥ ಎಂಬ ಸಂಬಂಧ ಕೂಡ ಅಗತ್ಯ. ಯಾರು ನನ್ನ ಸ್ನೇಹಿತನಾಗಲು ಅರ್ಹ ಎಂಬುದನ್ನು ಯೋಚಿಸಿ ನಿರ್ಧರಿಸಬೇಕು. ಗೆಳೆತನವನ್ನು ಪ್ರಾರಂಭಿಸುವುದು ಸುಲಭ. ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಮಹತ್ವದ್ದು. ಎರಡೂ ಕಡೆಯಿಂದ ಪ್ರಯತ್ನ ಮಾಡಿದಾಗ ಮಾತ್ರ ಆತ್ಮೀಯ ಸ್ನೇಹ ಬೆಳೆಯುತ್ತದೆ. ಒಬ್ಬರಲ್ಲಿ ವಿಶ್ವಾಸ ಕಡಿಮೆಯಾದರೂ ಗೆಳೆತನಕ್ಕೆ ಜಾಗವಿರುವುದಿಲ್ಲ. ಕೆಲಸ ಕಾರ್ಯಗಳಿಂದ ಸಮಯ ನೀಡಲು ಸಾಧ್ಯವಾಗಲಿಲ್ಲ ಎಂದರೆ ನೂರು ಜನ ಸ್ನೇಹಿತರಿದ್ದರೂ ಗೆಳೆತನ ಮಾಸಿ ಹೋಗುತ್ತದೆ. ಕೆಲ ಸಮಯ ಸ್ನೇಹಿತರಿಗೆ ಎಂದು ಮೀಸಲಿಡುವುದು ಅಗತ್ಯ. ಆಗ ಮಾತ್ರ ಭಾವನಾತ್ಮಕವಾಗಿ ಸುರಕ್ಷಿತರಾಗಿ ಇರಬಹುದು ಎಂಬುದು ಪ್ರಜ್ಞಾ ಬ್ರೇನ್ ಆಂಡ್ ಮೈಂಡ್ ಸೆಂಟರ್​ನ ನ್ಯೂರೋ ಸೈಕಿಯಾಟ್ರಿಸ್ಟ್ ಕಾರ್ತಿಕ್ ಕಶ್ಯಪ್ ಅವರ ಕಿವಿಮಾತು.

  ಬಿಜೆಪಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ; ಚೈತ್ರಾ ಕುಂದಾಪುರ ಸೇರಿ ನಾಲ್ವರು ಪೊಲೀಸರ ವಶ

  ಪಿಒಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ; ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts