ನ್ಯೂಸ್

ನೀವಾಗಿ ಬಂದರೆ ಚಿಕಿತ್ಸೆ, ಇಲ್ಲದಿದ್ದರೆ ಕೇಸು ಹಾಕಲಾಗುತ್ತೆ ತಬ್ಲಿಘಿಗಳಿಗೆ ಸರ್ಕಾರದ ಎಚ್ಚರಿಕೆ

ನವದೆಹಲಿ: ಸದ್ಯ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್​ ಕರೊನಾ ಸೋಂಕಿನ ಹಾಟ್​ಸ್ಪಾಟ್​ ಆಗಿದೆ. ಜಮಾತ್​ನಲ್ಲಿ ಪಾಲ್ಗೊಂಡಿದ್ದ ಸಾವಿರಕ್ಕೂ ಅಧಿಕ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. ದಿನೇದಿನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಹಾಗೂ ಅವರ ಸಂಪರ್ಕಕ್ಕೆ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಜಮಾತ್​ ನಂಟು ಮುಖ್ಯವಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರು ಹಂಚಿ ಹೋಗಿದ್ದಾರೆ. ಇವರನ್ನೆಲ್ಲ ಹುಡುಕುವುದು ಸವಾಲಾಗಿದೆ. ಜತೆಗೆ, ಕೆಲ ವಿದೇಶಿಯರು ಕೂಡ ಪೊಲೀಸರ ಕಣ್ತಪ್ಪಿಸಿ ಅವಿತುಕೊಂಡಿರುವ ಮಾಹಿತಿಗಳು ಇವೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಮಾತ್​ನಲ್ಲಿ ಪಾಲ್ಗೊಂಡಿದ್ದ 9000ಕ್ಕೂ ಅಧಿಕ ಜನರಿಗೆ ಸ್ವಯಂಪ್ರೇರಿತವಾಗಿ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿವೆ. ಹೀಗಿದ್ದರೂ ಇವರನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರ ವಿರುದ್ಧ ಕಾನುನೂ ಕ್ರಮದ ಎಚ್ಚರಿಕೆ ನೀಡಿವೆ. ಸ್ವಯಂ ಪ್ರೇರಿತವಾಗಿ ಬಂದು ತಪಾಸಣೆಗೆ ಒಳಗಾದರೆ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತರಾದ ಬಳಿಕ ಚಿಕಿತ್ಸೆಗೆಂದು ಬಂದು, ಜಮಾತ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖಚಿತವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಸಾಂ, ದೆಹಲಿ, ಉತ್ತರಪ್ರದೇಶ ಸೇರಿ ಹಲವು ರಾಜ್ಯಗಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ಪತ್ತೆಯಾದ ಒಂದು ಪ್ರಕರಣ ಹೊರತುಪಡಿಸಿದರೆ, ಉಳಿದೆಲ್ಲ ಪ್ರಕರಣಗಳಲ್ಲಿ ಸೋಂಕಿತರಿಗೆ ಜಮಾತ್​ನಲ್ಲಿ ಪಾಲ್ಗೊಂಡ ಹಿನ್ನೆಲೆ ಇದೆ. ಜಮಾತ್​ನಲ್ಲಿ ಪಾಲ್ಗೊಂಡವರು ಆರೋಗ್ಯಾಧಿಕಾರಿಗಳ ಬಳಿ ತೆರಳಿ ವರದಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಸ್ಸಾಂನ ಆರೋಗ್ಯ ಸಚಿವ ಹಿಮಂತಾ ಬಿಸ್ವಾಸ್​ ಹೇಳಿದ್ದಾರೆ. ಜಮಾತ್​ನಲ್ಲಿ ಭಾಗವಹಿಸಿದ್ದ 617 ಜನರಲ್ಲಿ 120ಕ್ಕೂ ಅಧಿಕ ಜನರು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪರ್ಮಿಟ್​ ನೀಡಲು ಚಿಂತನೆ: ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ತೆರವುಗೊಳಿಸಿದ ಬಳಿಕ ಹೊರ ರಾಜ್ಯಗಳಿಂದ ಇಲ್ಲಿಗೆ ಬರುವ ಜನರ ಮೇಲೆ ನಿಗಾ ವಹಿಸಲು ಪರ್ಮಿಟ್​ ವ್ಯವಸ್ಥೆ ಆರಂಭಿಸಲು ಅಸ್ಸಾಂ ಸರ್ಕಾರ ಚಿಂತನೆ ನಡೆಸಿದೆ. (ಏಜೆನ್ಸೀಸ್)