ನ್ಯೂಸ್

ಇ-ವಿ ತೆರಿಗೆ ಪ್ರಸ್ತಾವನೆಗೆ ಸರ್ಕಾರ ತಿರಸ್ಕಾರ: ರಸ್ತೆ ತೆರಿಗೆ ನಿರ್ಧಾರಕ್ಕೆ ರೆಡ್​ಸಿಗ್ನಲ್; 10 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ ಅನ್ವಯಿಸಲು ಮನವಿ

| ಕೀರ್ತಿನಾರಾಯಣ ಸಿ. ಬೆಂಗಳೂರು 
ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ತತ್ತರಿಸಿ ‘ಎಲೆಕ್ಟ್ರಿಕ್ ವಾಹನ’ಗಳತ್ತ ಚಿತ್ತ ಹರಿಸಿದ ಜನರಿಗೆ ರಸ್ತೆ ತೆರಿಗೆ ಭಾರ ಹೊರೆಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾದ ಸಾರಿಗೆ ಇಲಾಖೆ ನಿರ್ಧಾರಕ್ಕೆ ರಾಜ್ಯ ಸರ್ಕಾರ ‘ರೆಡ್ ಸಿಗ್ನಲ್’ ಕೊಟ್ಟಿದೆ. ಇ- ವಾಹನಗಳ ನೋಂದಣಿಗೆ ಟ್ಯಾಕ್ಸ್ ವಿಧಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿರುವುದರಿಂದ ವಿದ್ಯುತ್​ಚಾಲಿತ ವಾಹನ ಖರೀದಿದಾರರು ಕೊಂಚ ನಿರಾಳರಾಗಬಹುದು.

ದೇಶಾದ್ಯಂತ 2023 ಜು.14ರವರೆಗೆ 27,44,019 ಇ-ವಾಹನಗಳು ನೋಂದಣಿಯಾಗಿವೆ. ಕರ್ನಾಟಕದಲ್ಲಿ 2,39,948 ವಿದ್ಯುತ್​ಚಾಲಿತ ವಾಹನಗಳಿವೆ. ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬುಕ್ಕಿಂಗ್ ಹೆಚ್ಚುತ್ತಿರುವುದನ್ನು ಗಮನಿಸಿದ ಸಾರಿಗೆ ಇಲಾಖೆ, ಆದಾಯ ವೃದ್ಧಿಗೆ ರಸ್ತೆ ತೆರಿಗೆ ವಿಧಿಸಲು ನಿರ್ಧರಿಸಿತ್ತು.

ಅಲ್ಲದೆ, ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿರುವ ಸಿಎಂ ಸಿದ್ದರಾಮಯ್ಯ, ರಸ್ತೆ ತೆರಿಗೆ ವಿಧಿಸುವುದಕ್ಕೆ ಒಪ್ಪಿಗೆ ನೀಡಿಲ್ಲ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ಸರ್ಕಾರಗಳು ಈಗಾಗಲೇ ಇ-ವಾಹನಗಳ ಖರೀದಿಗೆ ಉತ್ತೇಜನ ನೀಡುತ್ತಿವೆ. 2030ರ ವೇಳೆಗೆ ದೇಶದಲ್ಲಿ ವಾಣಿಜ್ಯ ಬಳಕೆಯ ವಾಹನಗಳಲ್ಲಿ ಇ-ವಾಹನಗಳ ಪಾಲು ಶೇ.70, ಖಾಸಗಿ ವಾಹನಗಳಲ್ಲಿ ಶೇ.30, ಬಸ್​ಗಳಲ್ಲಿ ಶೇ.40 ಮತ್ತು ದ್ವಿಚಕ್ರ ಹಾಗೂ 3 ಚಕ್ರದ ವಾಹನಗಳಲ್ಲಿ ಶೇ.80 ಇ-ವಾಹನಗಳಾಗಿರಬೇಕು ಎಂದು ಕೇಂದ್ರ ಸರ್ಕಾರ ಗುರಿ ಹೊಂದಿದ್ದು, ಒಟ್ಟಾರೆ 2070ರ ವೇಳೆಗೆ ಪಳೆಯುಳಿಕೆ ಇಂಧನ ಬಳಕೆ ವಾಹನಗಳೇ ಇರಬಾರದೆಂದು ಗುರಿ ಇಟ್ಟುಕೊಂಡಿದೆ. ಆದರೀಗ ಇ-ವಾಹನಗಳ ಖರೀದಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರವೇ ನಿಲ್ಲಿಸಿದೆ. ಈ ಹಂತದಲ್ಲಿ ಕರ್ನಾಟಕದಲ್ಲಿ ರಸ್ತೆ ತೆರಿಗೆ ವಿನಾಯಿತಿಯನ್ನು ಮೊಟಕುಗೊಳಿಸಿ, ಟ್ಯಾಕ್ಸ್ ವಿಧಿಸಿದರೆ ವಿದ್ಯುತ್​ಚಾಲಿತ ವಾಹನಗಳ ಖರೀದಿದಾರರ ಸಂಖ್ಯೆ ದೊಡ್ಡಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿಲ್ಲ.

34 ಕೋಟಿ ವಾಹನಗಳು
  • ಒಟ್ಟಾರೆ ದೇಶಾದ್ಯಂತ 34,00,08,525 ವಾಹನಗಳಿವೆ
  • 27,44,019 ವಾಹನಗಳು ವಿದ್ಯುತ್​ಚಾಲಿತವಾಗಿವೆ
  • ಕರ್ನಾಟಕದಲ್ಲಿ ನೋಂದಾಯಿತ ವಾಹನಗಳು 2,98,55,843
  • ಇದರಲ್ಲಿ ಶೇ.0.80 ಅಂದರೆ 2,39,948 ಇ ವಾಹನಗಳು

ಅಧಿಕಾರಿಗಳು ಹೇಳೋದೇನು?

  • ರಸ್ತೆತೆರಿಗೆ ವಿನಾಯಿತಿ ಕೊಟ್ಟರೆ ಮುಂದೊಂದು ದಿನ ರಸ್ತೆ ತುಂಬ ಇ-ವಾಹನಗಳೇ ಇರಲಿವೆ
  • ತೆರಿಗೆ ವಿನಾಯಿತಿ ಮುಂದುವರಿಸಿದರೆ ಸಾರಿಗೆ ಇಲಾಖೆ ಆದಾಯ ಶೂನ್ಯವಾಗುತ್ತದೆ
  • 1 ಕೋಟಿ ರೂ. ಮಿಕ್ಕಿದ ಬೆಲೆಯ ಎಲೆಕ್ಟ್ರಿಕ್ ಕಾರುಗಳಿದ್ದು, ಅವುಗಳ ಖರೀದಿಯೂ ಹೆಚ್ಚಿದೆ
  • ಕನಿಷ್ಠ 10 ಲಕ್ಷ ರೂ. ಮೌಲ್ಯ ಮೇಲ್ಪಟ್ಟ ಇ-ಕಾರುಗಳಿಗಾದರೂ ರಸ್ತೆ ತೆರಿಗೆ ವಿಧಿಸಿದರೆ ತಪ್ಪೇನಿಲ್ಲ
  • ಪ್ರಸ್ತುತ 10 ಲಕ್ಷ ರೂ. ಮೇಲ್ಪಟ್ಟ ವಾಹನಕ್ಕೆ ಶೇ.17 ಹಾಗೂ 25 ಲಕ್ಷ ರೂ. ಮೇಲ್ಪಟ್ಟವುಗಳಿಗೆ ಶೇ.18 ತೆರಿಗೆ ಇದೆ.