ನವದೆಹಲಿ: ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ನ ಉಪಸ್ಥಿತಿ ಇರುವ ಬಗ್ಗೆ ಮಾಹಿತಿ ಇದ್ದು, ಈಗಾಗಲೇ 122 ಆರೋಪಿಗಳನ್ನು ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎನ್ಐಎ) ಬಂಧಿಸಿದೆ. ಈ ಸಂಬಂಧ 17 ಕೇಸ್ಗಳು ದಾಖಲಾಗಿವೆ. ತೆಲಂಗಾಣ, ಕೇರಳ, ಆಂಧ್ರಪ್ರದಶ, ಕರ್ನಾಟಕ, ತಮಿಳುನಾಡುಗಳಲ್ಲಿ ಈ ಆರೋಪಿಗಳಿದ್ದರು ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಬುಧವಾರ ತಿಳಿಸಿದೆ.
ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ. ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ ಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಸಕ್ರಿಯವಾಗಿದೆ ಎಂಬ ಅಂಶ ಎನ್ಐಎ ತನಿಖೆಯ ವೇಳೆ ಖಾತ್ರಿಯಾಗಿದೆ. ಇಸ್ಲಾಮಿಕ್ ಸ್ಟೇಟ್ ತನ್ನ ಸಿದ್ಧಾಂತವನ್ನು ಪ್ರಚುರ ಪಡಿಸಲು ಇಂಟರ್ನೆಟ್ನ ವಿವಿಧ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ಹೀಗಾಗಿ ಸೈಬರ್ ಸ್ಪೇಸ್ ಮೇಲೂ ನಿಗಾ ಇರಿಸಲಾಗಿದ್ದು, ಸೂಕ್ತ ಸಮಯದಲ್ಲಿ ಸರಿಯಾದ ಕ್ರಮವನ್ನೇ ಏಜೆನ್ಸಿಗಳು ತೆಗೆದುಕೊಳ್ಳುತ್ತಿವೆ ಎಂದು ಸರ್ಕಾರ ತಿಳಿಸಿದೆ.
ಈ ಚಟುವಟಿಕೆಗಳನ್ನು ನಡೆಸುವುದಕ್ಕೆ ಇದರಲ್ಲಿ ಸಕ್ರಿಯರಾಗಿ ಇರುವಂಥವರಿಗೆ ದುಡ್ಡು ಎಲ್ಲಿಂದ ಬರುತ್ತಿದೆ? ಯಾರು ಫಂಡಿಂಗ್ ಮಾಡುತ್ತಿದ್ದಾರೆ? ಎಂಬಿತ್ಯಾದಿ ಮಾಹಿತಿ ಸರ್ಕಾರದ ಬಳಿ ಇದೆ. ಅನ್ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಶನ್) ಆ್ಯಕ್ಟ್ 1967 ಪ್ರಕಾರ ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಂಟ್, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ, ದಾಯಿಷ್, ಇಸ್ಲಾಮಿಕ್ ಸ್ಟೇಟ್ ಇನ್ ಖೊರಸಾನ್ ಪ್ರೊವಿಯೆನ್ಸ್(ಐಎಸ್ಕೆಪಿ), ಐಎಸ್ಐಎಸ್ ವಿಲಾಯತ್ ಖೊರಸಾನ್, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದ ಶಾಮ್ ಖೊರಸಾನ್ ಮತ್ತು ಅವುಗಳ ಅಧೀನ ಸಂಘಟನೆಗಳನ್ನು ಅನ್ಲಾಫುಲ್ ಆ್ಯಕ್ಟಿವಿಟೀಶ್ (ಪ್ರಿವೆನ್ಶನ್) ಆ್ಯಕ್ಟ್ 1967ರ ಫಸ್ಟ್ ಷೆಡ್ಯೂಲ್ ಪ್ರಕಾರ ಉಗ್ರ ಸಂಘಟನೆಗಳು ಎಂದು ಘೋಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)