ನ್ಯೂಸ್

ಸರ್ಕಾರಿ ನೌಕರರಿಗೆ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ಹೆಚ್ಚಳ ನಿರೀಕ್ಷೆ

ನವದೆಹಲಿ: ಏಳನೇ ವೇತನ ಆಯೋಗದಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 2023ರ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ (ಡಿಎ) ಹೆಚ್ಚಳವಾಗುವ ಸಾಧ್ಯತೆಯಿದೆ. ಸರ್ಕಾರ ಪಿಂಚಣಿದಾರರಿಗೆ ಡಿಆರ್ (ಡಿಯರ್‌ನೆಸ್ ರಿಲೀಫ್) ಹೆಚ್ಚಿಸಲಿದೆ. ಇದಲ್ಲದೆ, ನೌಕರರು 18 ತಿಂಗಳ ಡಿಎ ಬಾಕಿಯನ್ನು ಪಡೆಯುವ ನಿರೀಕ್ಷೆ ಇದೆ.

ಡಿಎ ಮತ್ತು ಡಿಆರ್ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲ್ಪಡುತ್ತವೆ. ಜನವರಿ 1 ಮತ್ತು ಜುಲೈ 1ರಿಂದ ಜಾರಿಗೆ ಬರುತ್ತವೆ. ಸೆಪ್ಟೆಂಬರ್‌ನಲ್ಲಿನ ಕೊನೆಯ ಹೆಚ್ಚಳ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಅನ್ವಯವಾಗಿತ್ತು. ಆಗ ಡಿಎಯನ್ನು ಶೇಕಡಾ 4ರಷ್ಟು ಏರಿಸಲಾಗಿತ್ತು. ಇದಕ್ಕೂ ಮುನ್ನ ಸರ್ಕಾರ 7ನೇ ವೇತನ ಆಯೋಗದಡಿ ಮಾರ್ಚ್‌ನಲ್ಲಿ ಡಿಎಯನ್ನು ಶೇಕಡಾ 3ರಷ್ಟು ಹೆಚ್ಚಿಸಿತ್ತು.

ಜನವರಿ 2020ರಿಂದ ಜೂನ್ 2021ರವರೆಗಿನ ಅವಧಿಗೆ ಸಂಬಂಧಿಸಿದ 18 ತಿಂಗಳ ಬಾಕಿಯ ವಿಷಯವನ್ನು ಶೀಘ್ರದಲ್ಲೇ ಪರಿಹರಿಸುವ ನಿರೀಕ್ಷೆಯಿದೆ. ನೌಕರರು 18 ತಿಂಗಳ ಡಿಎ ಬಾಕಿ ಪಾವತಿಪಡೆಯಲಿದ್ದಾರೆ. ನೌಕರರ ವೇತನ ಶ್ರೇಣಿ ಮತ್ತು ರಚನೆಯ ಆಧಾರದ ಮೇಲೆ ಡಿಎ ಬಾಕಿ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಇದಲ್ಲದೆ, ಸರ್ಕಾರಿ ನೌಕರರ ವೇತನದ ಫಿಟ್‌ಮೆಂಟ್ ಅಂಶವನ್ನು ಸಹ ಮೇಲ್ಮುಖವಾಗಿ ಪರಿಷ್ಕರಿಸುವ ಸಾಧ್ಯತೆಯಿದೆ. ಹೀಗಾಗಿ ಅವರ ಸಂಬಳ ಮತ್ತಷ್ಟು ಹೆಚ್ಚಲಿದೆ. ತಮ್ಮ ವೇತನದಲ್ಲಿ ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸಬೇಕು ಎಂದು ನೌಕರರ ಸಂಘಗಳು ಒತ್ತಾಯಿಸುತ್ತಿವೆ.

ದೇಶದಲ್ಲಿನ ಹಣದುಬ್ಬರ ದರಗಳ ಆಧಾರದ ಮೇಲೆ ಡಿಎ ಹೆಚ್ಚಳವನ್ನು ಸರ್ಕಾರ ನಿರ್ಧರಿಸುತ್ತದೆ. ಹಣದುಬ್ಬರ ಹೆಚ್ಚಾಗಿದ್ದರೆ, ಡಿಎ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.