ನ್ಯೂಸ್

ಬಿರುಬಿಸಿಲಲ್ಲಿ ತಂಗಾಳಿ: ಬಿಸಿಗಾಳಿ ನಿರ್ವಹಣೆಗೆ ಸರ್ಕಾರದ ಕಾರ್ಯಯೋಜನೆ

Webdesk - Ravikanth

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಜಾಗತಿಕ ಹವಾಮಾನ ಬದಲಾವಣೆ ಪರಿಣಾಮ ಬಿಸಿ ಗಾಳಿ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಅದರ ನಿರ್ವಹಣೆ ಜತೆಯಲ್ಲೇ ಯಾವುದೇ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾರ್ಯಯೋಜನೆ ರೂಪಿಸಿದೆ. ಕಳೆದ 2 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಬಿಸಿ ಗಾಳಿ ಹೆಚ್ಚಾಗುತ್ತಿದೆ. ಬಿಸಿ ಗಾಳಿ ಹೆಚ್ಚಾಗುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇರುವುದರಿಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಜ್ಞರೊಂದಿಗೆ ಸೇರಿ ಕಾರ್ಯಯೋಜನೆ ರೂಪಿಸಿದೆ. ಜಾಗತಿಕ ತಾಪಮಾನ ಕಳೆದ 50 ವರ್ಷಗಳಲ್ಲಿ 1 ಡಿಗ್ರಿ ಹೆಚ್ಚಾಗಿತ್ತು. ಆದರೆ 2020-24ರ ಅವಧಿಯಲ್ಲಿಯೇ 1 ಡಿಗ್ರಿ ಹೆಚ್ಚಾಗುತ್ತದೆ ಎಂಬ ಅಂದಾಜಿದೆ. ಬೇಸಿಗೆಯ 4 ತಿಂಗಳಿನಲ್ಲಿ 2-3 ಡಿಗ್ರಿಯಷ್ಟು ಹೆಚ್ಚಾಗುತ್ತಿದ್ದ ತಾಪಮಾನ, 2-3 ವರ್ಷಗಳಿಂದ 4-6 ಡಿಗ್ರಿ ಸೆಲ್ಸಿಯಸ್​ನಷ್ಟು ಜಾಸ್ತಿಯಾಗುತ್ತಿದೆ. ಬಿಸಿ ಗಾಳಿ ಸಹ ಪ್ರಕೃತಿ ವಿಕೋಪವೇ ಆಗಿದೆ. ಇದನ್ನು ಸೈಲೆಂಟ್ ಡಿಸಾಸ್ಟರ್ ಎಂದೇ ಕರೆಯಲಾಗುತ್ತದೆ.

ಸಾವು ಹೆಚ್ಚಳ: ಬಿಸಿ ಗಾಳಿಯಿಂದ ದೇಶದಲ್ಲಿ ವರ್ಷಕ್ಕೆ 1000 ಸಾವು ಸಂಭವಿಸುತ್ತವೆ ಎಂಬ ಅಂದಾಜಿದೆ. ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 2000ಕ್ಕೂ ಹೆಚ್ಚಿನ ಸಾವುಗಳಾಗಿದ್ದವು. ರಾಜ್ಯದಲ್ಲಿ ಈವರೆಗೆ ಬಿಸಿ ಗಾಳಿಯಿಂದ ಯಾವುದೇ ಸಾವು ಸಂಭವಿಸಿಲ್ಲ.

ಕಾರ್ಯ ಯೋಜನೆ ಏನು?: ಬಿಸಿ ಗಾಳಿ ಪ್ರಕೃತಿ ವಿಕೋಪವೇ ಆಗಿರುವುದರಿಂದ ಕಂದಾಯ ಇಲಾಖೆ ವ್ಯಾಪ್ತಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರ್ಯಯೋಜನೆ ಸಿದ್ಧಪಡಿಸಿದೆ. ಆದರೆ ಯೋಜನೆಯನ್ನು ವಿವಿಧ ಇಲಾಖೆಗಳ ಮೂಲಕ ಅನುಷ್ಠಾನ ಮಾಡಬೇಕಾಗುತ್ತದೆ. ಯಾವ ಇಲಾಖೆಗೆ ಏನೇನು ಜವಾಬ್ದಾರಿ ಎಂಬುದನ್ನು ಯೋಜನೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಅದರಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ಕಾರ್ಯ ಯೋಜನೆ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ.

ಹೊರೆ ಇಲ್ಲ: ಕಾರ್ಯ ಯೋಜನೆ ಜಾರಿಗೆ ಹೆಚ್ಚಿನ ಹಣಕಾಸಿನ ಅಗತ್ಯವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಇಲಾಖೆಗಳು ತಮ್ಮ ಅನುದಾನದಲ್ಲಿಯೇ ರೂಪಿಸಬಹುದಾಗಿದೆ.

ಜನರೇನು ಮಾಡಬೇಕು?
  • ಕೊಡೆ, ಚಪ್ಪಲಿ ಇಲ್ಲದೇ ಹೊರ ಹೋಗಬಾರದು
  • ಟೋಪಿ ಧರಿಸಿರಬೇಕು
  • ಹಗುರ ಹಾಗೂ ಹತ್ತಿಯ ತೆಳು ಬಟ್ಟೆ ಬಳಸಬೇಕು
  • 11 ರಿಂದ 4 ಗಂಟೆಯ ಅವಧಿಯಲ್ಲಿ ದೈಹಿಕ ಶ್ರಮದ ಕೆಲಸಗಳನ್ನು ಮಾಡಬಾರದು
  • ಸಾಕಷ್ಟು ನೀರು, ಮಜ್ಜಿಗೆ, ಗ್ಲೂಕೋಸ್ ಸೇವಿಸಬೇಕು
  • ಮನೆಯಲ್ಲಿ ನೇರ ಬಿಸಿಲಿಗೆ ಕೂರಬಾರದು
  • ಶಾಖೋತ್ಪನ್ನವಾದರೆ ಮಂಜುಗಡ್ಡೆಯಿಂದ ಉಜ್ಜಬೇಕು
  • ಕಾಫಿ, ಮಸಾಲೆಯುಕ್ತ ವಸ್ತುಗಳ ಸೇವನೆ ಬೇಡ

ಗುಡುಗು ಸಿಡಿಲು ನಿರ್ವಹಣೆ: 2011-21ರ ಅವಧಿಯಲ್ಲಿ 812 ಜನ ಸಿಡಿಲಿನಿಂದ ಸಾವನ್ನಪ್ಪಿದ್ದಾರೆ. ಆದ್ದರಿಂದ ಮಳೆಗಾಲದಲ್ಲಿ ಗುಡುಗು-ಸಿಡಿಲು ನಿರ್ವಹಣೆ ಕಾರ್ಯಯೋಜನೆ ಸಿದ್ಧಪಡಿಸಿದೆ. ವಾತಾವರಣದಲ್ಲಿ ಬದಲಾವಣೆ ಗಮನಿಸಿ ಮನೆಯಲ್ಲಿರಬೇಕು. ಸಿಡಿಲು-ಗುಡುಗು ಇದ್ದಾಗ ಬಾಗಿಲು, ಕಿಟಕಿ ಬಳಿ ಇರಬಾರದು, ಛಾವಣಿಯಲ್ಲಿ ಒಣ ಹುಲ್ಲು ಇರಬಾರದು, ಸಿಡಿಲು ಇದ್ದಾಗ ಸ್ನಾನ ಮಾಡುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಕೆಲಸ ಮಾಡಬಾರದು. ಹೊರಗಡೆ ಇದ್ದಾಗ ಎರಡು ಕಾಲುಗಳ ನಡುವೆ ಮುಖವಿರಿಸಿ ಮಂಡಿಯೂರಿ ಕುಳಿತುಕೊಳ್ಳಬೇಕು, ನೆಲದ ಮೇಲೆ ಮಲಗಬಾರದು.

ಎಸ್ಸೆಮ್ಮೆಸ್ ಮಾಹಿತಿ: ಉಷ್ಣಾಂಶ ಎಷ್ಟು ಹೆಚ್ಚಾಗುತ್ತದೆ, ಗುಡುಗು-ಸಿಡಿಲು ಎಲ್ಲಿ ಬರುವ ಸಾಧ್ಯತೆಗಳಿವೆ ಎಂಬ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಎಸ್​ಎಂಎಸ್, ವಾಟ್ಸಾಪ್, ಇ-ಮೇಲ್​ಗಳ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಬಿಸಿಗಾಳಿ ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಅಪಾಯ ಆಗಬಾರದೆಂಬ ಕಾರಣಕ್ಕೆ ವಿವಿಧ ಇಲಾಖೆಗಳ ಜವಾಬ್ದಾರಿಯ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತದೆ. ಇದರ ಜತೆಗೆ ಗುಡುಗು-ಸಿಡಿಲು ನಿರ್ವಹಣಾ ಕಾರ್ಯಯೋಜನೆ ಸಹ ಸಿದ್ಧವಾಗಿದೆ. | ಡಾ. ಮನೋಜ್ ರಾಜನ್ ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

ಲೆಕ್ಕಾಚಾರ ಹೇಗೆ?: ಘಟ್ಟ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್, ಬಯಲು ಪ್ರದೇಶದಲ್ಲಿ 40 ಡಿಗ್ರಿ ಸೆಲ್ಸಿಯಸ್​ಗಿಂತ ಗರಿಷ್ಠ ಉಷ್ಣಾಂಶ ಹೆಚ್ಚಾದರೆ ಅದನ್ನು ಬಿಸಿ ಗಾಳಿ ಎಂದು ಪರಿಗಣಿಸಲಾಗುತ್ತದೆ.

ಆತಂಕವೇನು?
  • ಬಿಸಿ ಗಾಳಿ ಹೆಚ್ಚಾದರೆ ಜನ, ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ
  • ಕೆಲವು ಸಂದರ್ಭಗಳಲ್ಲಿ ಸಾವನ್ನಪ್ಪುವ ಸಾಧ್ಯತೆ ಇದೆ

ಯಾವ ಜಿಲ್ಲೆಗಳಲ್ಲಿ ಹೆಚ್ಚು?: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ಬಿಸಿಗಾಳಿ ಬೀಸುವ ಸಾಧ್ಯತೆ ಗುರುತಿಸಲಾಗಿದೆ. ಈ ಪೈಕಿ ಕೆಲವು ಜಿಲ್ಲೆಗಳಲ್ಲಿ ಹಿಂದಿನ ವರ್ಷಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದ ಉದಾಹರಣೆಗಳು ಇವೆ.

ಇಲಾಖೆಗಳ ಹೊಣೆ
  • ಕಂದಾಯ: ಎಲ್ಲ ಇಲಾಖೆಗಳ ಜತೆ ಸಮನ್ವಯ, ಕಾರ್ಯ ಯೋಜನೆ ಅನುಷ್ಠಾನದ ಮೇಲುಸ್ತುವಾರಿ
  • ಆರೋಗ್ಯ: ಸಿಬ್ಬಂದಿಗೆ ತರಬೇತಿ, ಹಾಸಿಗೆಗಳ ಮೀಸಲಿರಿಸುವುದು, ಔಷಧ, ಒಆರ್​ಎಸ್ ಪುಡಿ ದಾಸ್ತಾನು ಮಾಡುವುದು
  • ಸಾರಿಗೆ: ಬಸ್ ನಿಲ್ದಾಣದಲ್ಲಿ ಶೆಲ್ಟರ್​ಗಳ ನಿರ್ವಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಕುಡಿಯುವ ನೀರು, ಬಸ್​ಗಳ ಸಮಯದಲ್ಲಿ ಬದಲಾವಣೆ, ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ಬಸ್​ಗಳನ್ನು ಓಡಿಸುವುದು
  • ಕಾರ್ವಿುಕ : ಕಾರ್ವಿುಕರ ಆರೋಗ್ಯ ತಪಾಸಣೆ, ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಕೆಲಸ ನೀಡದಂತೆ ಗಮನ, ಕಾರ್ವಿುಕರು ಕೆಲಸ ಮಾಡುವ ಕಡೆ ಕುಡಿಯುವ ನೀರಿನ ವ್ಯವಸ್ಥೆ
  • ಪಶು ಸಂಗೋಪನೆ: ಜಾನುವಾರುಗಳ ಆರೋಗ್ಯ ತಪಾಸಣೆ, ಶೆಲ್ಟರ್​ಗಳ ನಿರ್ವಣ, ಔಷಧ ದಾಸ್ತಾನು, ಕುಡಿಯುವ ನೀರಿನ ವ್ಯವಸ್ಥೆ
  • ಐಟಿ ಇಲಾಖೆ: ಬಲ್ಕ್ ಎಸ್​ಎಂಎಸ್​ಗಳನ್ನು ರವಾನಿಸುವುದು, ಗ್ರೂಪ್​ಗಳನ್ನು ರಚನೆ ಮಾಡುವುದು, ಡ್ಯಾಶ್ ಬೋರ್ಡ್ ರಚಿಸಿ ಮಾಹಿತಿ ನೀಡುವುದು.
  • ಗ್ರಾಮೀಣಾಭಿವೃದ್ಧಿ: ನರೇಗಾ ಕೂಲಿಕಾರರಿಗೆ ಕೆಲಸದ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ಮಧ್ಯಾಹ್ನ 11-3 ಗಂಟೆಯ ಅವಧಿಯಲ್ಲಿ ಬಿಡುವು, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮದಲ್ಲಿ ಸಂತೆಗಳ ಸಮಯದಲ್ಲಿ ಬದಲಾವಣೆ
  • ಪ್ರವಾಸೋದ್ಯಮ: ಪ್ರವಾಸಿಗರ ನೋಂದಣಿ, ಬಿಸಿ ಗಾಳಿಯ ಬಗ್ಗೆ ಜಾಗೃತಿ ಮೂಡಿಸುವುದು
  • ಶಿಕ್ಷಣ : ಶಾಲೆ-ಕಾಲೇಜು ಸಮಯದಲ್ಲಿ ಬದಲಾವಣೆ, ಮಧ್ಯಾಹ್ನ 11 ರಿಂದ 3 ಗಂಟೆ ಅವಧಿಯಲ್ಲಿ ಶಾಲೆಗಳು ಇಲ್ಲದಂತೆ ನೋಡಿಕೊಳ್ಳುವುದು, ಮಧ್ಯಾಹ್ನದ ಬಿಸಿಯೂಟ ಆರಂಭಿಸುವುದು, ಹೊರ ಭಾಗದಲ್ಲಿ ಶಾಲೆ ನಡೆಸಬಾರದು, ಶಾಲೆಯಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಮಕ್ಕಳು ಬಿಸಿಲಿಗೆ ಹೋಗದಂತೆ ಗಮನ ಹರಿಸುವುದು
  • ಇಂಧನ : ಸತತ ವಿದ್ಯುತ್ ಸರಬರಾಜು ಮಾಡುವುದು, ವಿದ್ಯುತ್ ಕಡಿತವಾಗದಂತೆ ಎಚ್ಚರಿಕೆ ತೆಗೆದುಕೊಳ್ಳುವುದು
  • ಪೌರಸಂಸ್ಥೆಗಳು: ರಸ್ತೆಗಳಿಗೆ ದಿನಕ್ಕೆ ಎರಡು ಬಾರಿ ನೀರು ಸಿಂಪಡಣೆ, ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ, ಪಾರ್ಕ್​ಗಳಲ್ಲಿ ನೆರಳಿನ ವ್ಯವಸ್ಥೆ, ಮಾರುಕಟ್ಟೆಗಳ ಸಮಯದಲ್ಲಿ ಬದಲಾವಣೆ
  • ವಾರ್ತಾ ಇಲಾಖೆ: ಕಾಲಕಾಲಕ್ಕೆ ಮಾಧ್ಯಮಗಳ ಮೂಲಕ ಜಾಗೃತಿ, ಜಿಲ್ಲಾ ಕೇಂದ್ರದಲ್ಲಿ ಎಲ್​ಇಡಿ ಸ್ಕ್ರೀನ್ ವ್ಯವಸ್ಥೆ