ನ್ಯೂಸ್

'ಅಕ್ಕಿ ಇಲ್ಲದಿದ್ದರೆ ಹಣ ಕೊಡಿ' ಎನ್ನುವ ಬಿಜೆಪಿ ಸವಾಲಿಗೆ ಉತ್ತರ ಕೊಟ್ಟಿದ್ದೇವೆ: ಸಿದ್ದರಾಮಯ್ಯ


ಬೆಂಗಳೂರು: ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರಧಾನ್ಯವನ್ನು ಜುಲೈ1 ರಿಂದ ನೀಡಬೇಕಾಗಿದೆ. ಹೆಚ್ಚಿನ ಪ್ರಮಾಣದ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ. 170ನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ರಾಜ್ಯ ಬಿಜೆಪಿ ಕೇಂದ್ರದೊಂದಿಗೆ ಮಾತನಾಡಿ ಕರ್ನಾಟಕಕ್ಕೆ ಹೆಚ್ಚಿನ ಅಕ್ಕಿ ಕೊಡಿಸಬೇಕಿತ್ತು. ನಾನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೆ. ರಾಜ್ಯ ಆಹಾರ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಕ್ಕಿ ಸರಬರಾಜು ಮಾಡಲು ಮನವಿ ಮಾಡಿದ್ದರು. ಎನ್​​ಸಿಸಿಎಫ್, ನಫೆಡ್, ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಅಕ್ಕಿ ಪೂರೈಸಲು ಸೂಚಿಸಿರುವ ದರ ಹೆಚ್ಚಾಗಿದೆ. ಎನ್​​​ಸಿಸಿಎಫ್​​​ನವರು 32.94 ರೂ.ದರ ಸೂಚಿಸಿದ್ದು, ನಾವು 32.24ರೂ.ಗೆ ನೀಡಬೇಕೆಂದು ಕೋರಿದ್ದೇವೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲಾಗುತ್ತಿದೆ' ಎಂದು ತಿಳಿಸಿದರು.

ಜುಲೈ 1ರಿಂದ ಅಕ್ಕಿ ನೀಡಲಾಗುವುದು ಅಂತ ಭರವಸೆ ನೀಡಲಾಗಿದೆ. ರಾಜ್ಯಕ್ಕೆ ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಇಷ್ಟು ಪ್ರಮಾಣದ ಅಕ್ಕಿಯನ್ನು ಯಾವ ರಾಜ್ಯದವರೂ ಪೂರೈಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ರಚಿಸಿದ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಹಿಂದೆ ನಮ್ಮ ಸರ್ಕಾರ ಜನರಿಗೆ 7 ಕೆಜಿವರೆಗೆ ಅಕ್ಕಿ ಪೂರೈಸುತ್ತಿತ್ತು. ಈಗ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಲ್ಲಿಯೂ ಅಕ್ಕಿಯ ದರ ಹೆಚ್ಚಾಗಿದೆ ಎಂದರು.
ಬಿಜೆಪಿ ಸವಾಲಿಗೆ ಇದು ಉತ್ತರ

ರಾಜ್ಯ ಸರ್ಕಾರ ಅಕ್ಕಿ ಕೊಡಲು ವಿಫಲವಾಗುತ್ತಿದೆ ಎಂದು ಬಿಜೆಪಿ ನಾಯಕರು ಸಿದ್ದರಾಮಯ್ಯ ಸರ್ಕಾರವನ್ನು ಆಡಿಕೊಂಡಿದ್ದರು. 'ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಅಕ್ಕಿ ಮೊತ್ತದ ಹಣ ಕೊಡಿ' ಎನ್ನುವ ಸವಾಲನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಈ ಸವಾಲನ್ನು ಸ್ವೀಕರಿಸಿದ ಸರ್ಕಾರ ಅಕ್ಕಿ ಬದಲಿಗೆ ಅಕ್ಕಿ ಮೊತ್ತದ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಾಕುವ ನಿರ್ಧಾರ ತೆಗೆದುಕೊಂಡು ಬಿಜೆಪಿಗೆ ಪ್ರತ್ಯುತ್ತರ ನೀಡಿದೆ.