ನ್ಯೂಸ್

ಸಿದ್ದರಾಮಯ್ಯ ಸರ್ಕಾರದ 14 ಬೃಹತ್ ಹಗರಣ ಮುಚ್ಚಿ ಹಾಕಿದ ಅಧಿಕಾರಿಗಳು; ಬಿಜೆಪಿಯಿಂದಲೇ ಕೇಳಿ ಬಂತು ಮರು ತನಿಖೆಯ ಕೂಗು!

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಬೃಹತ್ ಅಕ್ರಮಗಳ ಸಂಬಂಧಪಟ್ಟಂತೆ ದಾಖಲೆ ಹಾಗೂ ಸಾಕ್ಷಾಧಾರಗಳ ಸಹಿತ ಸಂಪೂರ್ಣ ದಾಖಲೆ ಒದಗಿಸಿದ್ದರೂ ತನಿಖೆ ನಡೆಸದೆ ಲೋಕಾಯುಕ್ತ ಹಾಗೂ ಭ್ರಷ್ಟಾಚರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು 14 ಬೃಹತ್ ಹಗರಣಗಳನ್ನು ಮುಚ್ಚಿಹಾಕಿರುವುದು ಬಹಿರಂಗವಾಗಿದೆ.

ಸಿದ್ದರಾಮಯ್ಯ ಸೇರಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಕಾಂಗ್ರೆಸ್ಸಿನ ನಾಯಕರ, ಹಿರಿಯ ಅಧಿಕಾರಿಗಳಿಂದ ರಾಜಕೀಯ ಮತ್ತು ಹಣದ ಪ್ರಭಾವಕ್ಕೆ ಒಳಗಾದ ಲೋಕಾಯುಕ್ತ ಹಾಗೂ ಎಸಿಬಿ ಅಧಿಕಾರಿಗಳು, ದೂರುದಾರರಿಂದ ಯಾವುದೇ ಹೇಳಿಕೆ ಪಡೆಯದೆ ಏಕಾಏಕಿ 14 ಹಗರಣ ಮುಕ್ತಾಯಗೊಳಿಸಿದ್ದಾರೆ. ಹಾಗಾಗಿ, ಮುಚ್ಚಿ ಹಾಕಿರುವ ಈ ಎಲ್ಲ ಹಗರಣಗಳನ್ನು ಮರು ತನಿಖೆ ನಡೆಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

ಮುಚ್ಚಿ ಹಾಕಿರುವ ಪ್ರಕರಣಗಳ ಸಂಬಂಧ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಪಿಐಎಲ್ ಸಲ್ಲಿಸಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ಅವರು, ಹಗರಣಗಳನ್ನು ಸಿಐಡಿ ಮೂಲಕ ತನಿಖೆ ನಡೆಸಲು ತಕ್ಷಣ ಆದೇಶ ಹೊರಡಿಸಬೇಕು. 2013 ರಿಂದ 2018ರವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 121 ಬೃಹತ್ ಹಗರಣಗಳ ನಡೆದಿವೆ. ಈ ಸಂಬಂಧ ಸಂಪೂರ್ಣ ದಾಖಲೆಗಳ ಸಹಿತ ಎಸಿಬಿ ಮತ್ತು ಲೋಕಾಯುಕ್ತಕ್ಕೆ ಪ್ರತ್ಯೇಕವಾಗಿ ದೂರು ದಾಖಲಿಸಲಾಗಿತ್ತು ಎಂದು ಎನ್. ಆರ್.ರಮೇಶ್ ವಿವರಿಸಿದರು.

ಹಗರಣಗಳ ವಿವರ:

  • ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಳೆ ಆಧಾರಿತ ಕೃಷಿ ಭೂಮಿ ಹೊಂದಿರುವ ರೈತರ ಜಮೀನುಗಳಿಗೆ ಉಚಿತವಾಗಿ ಕೃಷಿ ಹೊಂಡ ನಿರ್ಮಿಸುವ ಯೋಜನೆಯಲ್ಲಿ 800 ಕೋಟಿ ರೂ. ಹಗರಣ
  • ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 560 ಕೋಟಿ ರೂ ಹಗರಣ
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಡರ್‌ಗ್ರೌಂಡ್ ಡಸ್ಟ್‌ಬಿನ್‌ಗಳ ಅಳವಡಿಕೆಯಲ್ಲಿ 200 ಕೋಟಿ ರೂ. ಹಗರಣ
  • ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ 5 ಸಾವಿರ ಕೋಟಿ ರೂ.ಮೌಲ್ಯದ ಎಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು 65 ವರ್ಷಗಳ ಗುತ್ತಿಗೆ ಪಡೆಯುವ ಹೆಸರಿನಲ್ಲಿ ಹಗರಣ
  • ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಂಡು 35 ಕೋಟಿ ರೂ.ಜಾಹೀರಾತು ಶುಲ್ಕ ಕಟ್ಟದೆ ವಂಚನೆ
  • 160 ಕೋಟಿ ರೂ. ಎಲ್‌ಇಡಿ ದೀಪ ಅಳವಡಿಸುವ ಯೋಜನೆ ಹೆಸರಿನಲ್ಲಿ ಟೆಂಡರ್ ನಿಯಮ ಉಲ್ಲಂಘಿಸಿ ಪೂರ್ವ ನಿಗದಿತ ಗುತ್ತಿಗೆದಾರರಿಗೆ ಏಕಪಕ್ಷೀಯವಾಗಿ ಟೆಂಡರ್ ಕೊಟ್ಟಿರುವ ಹಗರಣ
  • ಪಾಲಿಕೆಯಲ್ಲಿ ನಕಲಿ ಪೌರ ಕಾರ್ಮಿಕರ ವೇತನದ ಹೆಸರಿನಲ್ಲಿ 934 ಕೋಟಿ ರೂ.ಲೂಟಿ ಹಾಗೂ ರಾಜಕಾಲುವೆ ಹೂಳೆತ್ತುವ ಹೆಸರಿನಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚರ
  • ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಕಾನೂನುಬಾಹಿರವಾಗಿ ಸರ್ಕಾರಕ್ಕೆ ಸೇರಿದ್ದ ನಾಲ್ಕು ಸಾವಿರ ಚದರ ಅಡಿ ಜಾಗದ ಕಬಳಿಕೆ

ಈ ಮೇಲಿನ ಎಲ್ಲ ಹಗರಣಗಳನ್ನು ದಾಖಲೆ ಸಮೇತ ದೂರು ಸಲ್ಲಿಕೆಯಾದರೂ ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳು ಕಾನೂನಿನ ಎಲ್ಲ ನಿಯಮವನ್ನು ಗಾಳಿಗೆ ತೂರಿ ಹಗರಣಗಳನ್ನು ಮುಕ್ತಾಯಗೊಳಿಸಿರುವ ಬಗ್ಗೆ ಗಂಭೀರ ಆರೋಪಗಳಿವೆ.