| ರುದ್ರಣ್ಣ ಹರ್ತಿಕೋಟಿ ಬೆಂಗಳೂರು
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಈ ವರ್ಷ 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟವಾಗಿದ್ದು, ಹಾನಿಗೆ ಒಳಗಾಗಿರುವ ಮೂಲಸೌಕರ್ಯವನ್ನು ಮತ್ತೆ ಅಭಿವೃದ್ಧಿ ಪಡಿಸುವ ದೊಡ್ಡ ಆರ್ಥಿಕ ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ರಾಜ್ಯ 2018ರಿಂದ ಸತತ ನಾಲ್ಕನೇ ವರ್ಷ ಅಕಾಲಿಕ ಮಳೆಯಿಂದ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2011ರಲ್ಲಿ ಮಾತ್ರ ಪ್ರವಾಹ ಹಾಗೂ ಬರ ಎರಡೂ ಒಟ್ಟಿಗೆ ಬಂದಿತ್ತು. ನಾಲ್ಕು ವರ್ಷದಿಂದ ನಿರಂತರ ಮಳೆಯಾಗುತ್ತಿದ್ದು, ಕಳೆದ 60 ವರ್ಷಗಳಲ್ಲೇ ಇದು ಅತಿ ಹೆಚ್ಚಿನ ಎರಡನೇ ‘ವರ್ಷ’ಧಾರೆಯಾಗಿದೆ. ಬೆಳೆ ಹಾನಿ ಒಂದೆಡೆಯಾದರೆ, ಮೂಲಸೌಕರ್ಯಕ್ಕೆ ಆಗಿರುವ ಹಾನಿಯನ್ನು ಮತ್ತೆ ಕಟ್ಟುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕೇಂದ್ರ ಸರ್ಕಾರದಿಂದ ಎಸ್ಡಿಆರ್ಎಫ್ ನಿಯಮಗಳಲ್ಲಿ ಬರುವ ಮೊತ್ತ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕೇಂದ್ರದಿಂದ ನೆರವು ಕೋರಲು ರಾಜ್ಯ ಸರ್ಕಾರ ಮನವಿ ಸಿದ್ದಪಡಿಸಿದೆ. ಎಷ್ಟು ವ್ಯಾಪಕ ಮಳೆಯಾಗಿದೆ, ಮೂಲಸೌಕರ್ಯ, ಬೆಳೆ ಹಾನಿ ಎಷ್ಟಾಗಿದೆ, ಎಷ್ಟು ಪರಿಹಾರ ಬೇಕು ಎಂಬುದನ್ನು ವಿವರಿಸಲಾಗಿದೆ. ಕೇಂದ್ರ ಸರ್ಕಾರ ಈಗ ತಂಡವನ್ನು ಕಳುಹಿಸಿ ಅಧ್ಯಯನ ಮಾಡಿಸಬೇಕಿದೆ.
ಕೇಳಿದಷ್ಟು ಕೊಡದ ಕೇಂದ್ರ: ಕೇಂದ್ರ ಸರ್ಕಾರ ಯಾವುದೇ ವರ್ಷ ರಾಜ್ಯದಲ್ಲಿ ಆಗಿರುವ ಹಾನಿಗೆ ನಿಯಮದ ಪ್ರಕಾರ ನೀಡಬೇಕಾಗಿರುವಷ್ಟು ಹಣವನ್ನೇನು ನೀಡುತ್ತಿಲ್ಲ. ಆದ್ದರಿಂದ ಈ ವರ್ಷ ಸಹ ಎಷ್ಟು ನೀಡುತ್ತದೆಂಬ ಆತಂಕವಂತೂ ರಾಜ್ಯ ಸರ್ಕಾರಕ್ಕೆ ಇದ್ದೇ ಇದೆ. ಜತೆಗೆ, ರಾಜ್ಯ ಸರ್ಕಾರವೇ ಹೆಚ್ಚಿನ ಮೊತ್ತವನ್ನು ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿಯೂ ಭರಿಸುವುದಕ್ಕೆ ಸಿದ್ದವಾಗಬೇಕಾಗಿದೆ.
ಎಷ್ಟು ಹಾನಿ?: ರಾಜ್ಯ ಸರ್ಕಾರ ಆಗಸ್ಟ್ನಲ್ಲಿ ಸಲ್ಲಿಸಿರುವ ಮನವಿ ಪ್ರಕಾರ, 5690.52 ಕೋಟಿ ರೂ. ಹಾನಿಯಾಗಿದೆ. ಕೇಂದ್ರದಿಂದ ನಿಯಮದ ಪ್ರಕಾರ 765.84 ಕೋಟಿ ರೂ.ಗಳಿಗೆ ಕೋರಿಕೆ ಸಲ್ಲಿಸಿದೆ. ಆದರಿನ್ನೂ ಯಾವುದೇ ಮೊತ್ತ ಬಿಡುಗಡೆಯಾಗಿಲ್ಲ. ಈಗ ಸಲ್ಲಿಸಲು ಸಿದ್ದವಾಗಿರುವ ಮನವಿ ಪ್ರಕಾರ, 11916.30 ಕೋಟಿ ರೂ. ಮೊತ್ತದ ಹಾನಿಯಾಗಿದೆ. ನಿಯಮದ ಪ್ರಕಾರ 1281.92 ಕೋಟಿ ರೂ.ಗೆ ಮನವಿ ಮಾಡಲಾಗುತ್ತದೆ. ಮಳೆಯಿಂದ ದ್ವಿದಳ ಧಾನ್ಯಗಳು, ಹತ್ತಿ, ಜೋಳ, ರಾಗಿ, ಮುಸುಕಿನ ಜೋಳ, ಮೆಣಸಿನಕಾಯಿ ಹಾನಿಯಾಗಿದೆ. ಮೋಡ ಮುಸುಕಿದ ವಾತಾವರಣದಿಂದ ದ್ರಾಕ್ಷಿ, ಕಾಫಿ, ಅಡಕೆ, ಮೆಣಸು ಕೀಟಬಾಧೆ ಹಾಗೂ ರೋಗಗಳಿಂದ ನರಳುತ್ತಿವೆ ಎಂಬುದನ್ನು ಮನವಿಯಲ್ಲಿ ವಿವರಿಸಲಾಗಿದೆ.
ಅತ್ಯಧಿಕ ಮಳೆ: ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಮೇ ತಿಂಗಳಿನಲ್ಲಿ ಚಂಡಮಾರುತ ಬಂದು ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕ ಹಾನಿಯಾಗಿತ್ತು. ಜೂನ್ನಿಂದ ಸೆಪ್ಟಂಬರ್ ತನಕ ಬಂದ ಮಳೆಗೆ ಭೂ ಕುಸಿತ, ಮೂಲಸೌಕರ್ಯ ಮತ್ತು ಬೆಳೆ ಹಾನಿಯಾಗಿತ್ತು. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ವ್ಯಾಪಕ ಮಳೆಯಿಂದ ಬೆಳೆ ಹಾನಿ, ಮೂಲಸೌಕರ್ಯ ಹಾನಿಯಾಗಿದೆ. ಈ ಅವಧಿಯಲ್ಲಿ ವಾಡಿಕೆಯ ಮಳೆ 166 ಮಿಮೀ ಇದ್ದರೆ, ಬಂದಿರುವುದು 307 ಮಿಮೀ. ನವೆಂಬರ್ನಲ್ಲಿ ಮಾಮೂಲಿಗಿಂತ ಶೇ.592 ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.876, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ.417, ಮಲೆನಾಡಿನಲ್ಲಿ ಶೇ.502 ಹಾಗೂ ಕರಾವಳಿಯಲ್ಲಿ ಶೇ.498 ಹೆಚ್ಚಿನ ಮಳೆಯಾಗಿದೆ.
ರಾಜ್ಯದ ಮೇಲೆ ಹೊರೆ ಏಕೆ?: ಕೇಂದ್ರ ಸರ್ಕಾರ ನೀಡುವ ಹಣದಲ್ಲಿ ಹಾನಿ ಸರಿಪಡಿಸಲು ಸಾಧ್ಯವಿಲ್ಲ. ಹಾನಿಗೊಳಗಾದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡುತ್ತಿದೆ. ರೈತರಿಗೆ ಇನ್ಪುಟ್ ಸಬ್ಸಿಡಿ ನೀಡಲು ಕೇಂದ್ರದ ಹಣ ಸಾಕಾಗದು. ಈ ವರ್ಷದಲ್ಲಿ ಒಟ್ಟಾರೆ 12 ಲಕ್ಷ ಹೆಕ್ಟೇರ್ ಬೆಳೆ, 20,083 ಮನೆಗಳಿಗೆ ಹಾನಿಯಾಗಿದೆ. ಸಾವಿರಾರು ಕಿಮೀ ರಸ್ತೆ, ಸೇತುವೆ, ಕುಡಿಯುವ ನೀರು ಯೋಜನೆಗಳು ಹಾಳಾಗಿವೆ. ಅವುಗಳನ್ನು ಮತ್ತೆ ಕಟ್ಟುವುದು ಸವಾಲಿನ ಕೆಲಸ.