ಮಹಾರಾಷ್ಟ್ರ: ಇಲ್ಲಿನ ಗೊಂಡಿಯಾ ಜಿಲ್ಲೆಯಲ್ಲಿ ಶುಕ್ರವಾರ (ನ.29) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(MSRTC) ಬಸ್ ಪಲ್ಟಿಯಾದ ಪರಿಣಾಮ 10 ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿದ್ದು, 25 ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪೂರ್ವ ಮಹಾರಾಷ್ಟ್ರದ ಭಂಢಾರದಿಂದ ಗೊಂಡಿಯಾ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಿದ್ದ 'ಶಿವ ಸಾಹಿ' ಹೆಸರಿನ ಸರ್ಕಾರಿ ಬಸ್, ಸದಾಕರ್ಜುನಿ ತಾಲೂಕಿನ ದವ್ವಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ನಲ್ಲಿ ಅಂದಾಜು 36 ಪ್ರಯಾಣಿಕರಿದ್ದರು ಎಂದು ಪ್ರಾಥಮಿಕ ವರದಿ ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗಾಯಗೊಂಡ ಪ್ರಯಾಣಿಕರನ್ನು ಸುತ್ತಮುತ್ತಲಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಹಿರಿಯ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳು ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ, ದೇಶದಲ್ಲಿ ಕೃಷಿ ಉತ್ಪಾದನೆ ಕುಸಿತಕ್ಕೆ ಮೋದಿ ಸರ್ಕಾರದ ಮುನ್ನುಡಿ: CM Siddaramaiah ಕಿಡಿ
ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಪಘಾತಕ್ಕೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡ ಎಲ್ಲಾ ಪ್ರಯಾಣಿಕರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾಗಳ ಜತೆ ಮಾತನಾಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ. ಮೃತ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಇನ್ನು ಈ ಕುರಿತು ಮಾಜಿ ಡಿಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಮೃತರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ, (ಏಜೆನ್ಸೀಸ್).