ನ್ಯೂಸ್

ಸರ್ಕಾರಿ ಆಸ್ತಿ ನಗದೀಕರಣ!: ಸಂಪನ್ಮೂಲ ಸಂಗ್ರಹ ಉದ್ದೇಶ; ಸ್ವತ್ತು ಮೌಲ್ಯಮಾಪನಕ್ಕೆ 3 ತಿಂಗಳ ಗಡುವು

Webdesk - Ravikanth

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾ ಸೇರಿ ವಿವಿಧ ಕಾರಣಗಳಿಂದಾಗಿ ರಾಜ್ಯಕ್ಕೆ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೊಸ ಮಾರ್ಗದ ಚಿತ್ತ ಹರಿಸಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ, ಅಡವಿಡುವ ಅಥವಾ ಖಾಸಗೀಕರಣಗೊಳಿಸುವ ಮೂಲಕ ಸಂಪನ್ಮೂಲ ಸಂಗ್ರಹಿಸಲು ಸಿದ್ಧತೆ ಆರಂಭಿಸಿದೆ. ಈ ಆಸ್ತಿ ನಗದೀಕರಣ ಪ್ರಕ್ರಿಯೆಯ ಮೊದಲ ಹಂತವಾಗಿ ರಾಜ್ಯ ಸರ್ಕಾರದ ನಿಗಮ ಮತ್ತು ಮಂಡಳಿಗಳ ಆಸ್ತಿ ಮೌಲ್ಯಮಾಪನ ಮತ್ತು ಶ್ರೇಣಿಕರಣಕ್ಕಾಗಿ ಈಗಾಗಲೇ 3 ತಿಂಗಳ ಗಡುವು ನೀಡಲಾಗಿದೆ.

ನಡೆದಿದೆ ಸಿದ್ಧತೆ: ಈಗಾಗಲೇ ಮುಖ್ಯ ಕಾರ್ಯದರ್ಶಿ ಎಲ್ಲ ಇಲಾಖೆಗೂ ಪತ್ರ ಬರೆದು ಎಲ್ಲೆಲ್ಲಿ ಆಸ್ತಿ ನಗದೀಕರಣ ಮಾಡಬಹುದೆಂಬ ಮಾಹಿತಿ ಕೋರಿದ್ದಾರೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಆಸ್ತಿ ಹೆಚ್ಚಿರುವುದರಿಂದಲೇ ಇವುಗಳ ಮೌಲ್ಯಮಾಪನ, ವರ್ಗೀಕರಣ ಮಾಡಬೇಕು. ಇಂದಿನ ಮಾರುಕಟ್ಟೆ ಅಂದಾಜಿಗೆ ಬೆಲೆ ನಿಗದಿ ಮಾಡಿ, 3 ತಿಂಗಳ ಅವಧಿಯಲ್ಲಿ ಈ ಕಾರ್ಯ ಮುಗಿಸಬೇಕೆಂದು ತಿಳಿಸಲಾಗಿದೆ. ನಿಗಮಗಳ ದಾಖಲೆಗಳಲ್ಲಿ ಆಸ್ತಿ ಮೌಲ್ಯ 60 ವರ್ಷಗಳ ಹಿಂದಿನದಿದೆ. ಇಂದಿನ ದರಕ್ಕೆ ಅಜಗಜಾಂತರ ವ್ಯತ್ಯಾಸವಿವೆ.

ಕೇಂದ್ರದ ಬಳಿಕ ರಾಜ್ಯ: ಕೇಂದ್ರ ಸರ್ಕಾರ 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ನಗದೀಕರಣ ಘೋಷಿಸಿದ ಬಳಿಕ ರಾಜ್ಯ ಈ ಕಾರ್ಯ ಕೈಗೊಂಡಿದೆ. 2022-23ರಿಂದ ಜಿಎಸ್​ಟಿ ಪರಿಹಾರ ನಿಂತು ಹೋದ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ರಾಜ್ಯ ಒಳಗಾಗಲಿದೆ. ಬದ್ಧವೆಚ್ಚವೂ ಮಿತಿಮೀರಿ ಹೆಚ್ಚಾಗಲಿದೆ. ಆದ್ದರಿಂದಲೇ ಸಂಪನ್ಮೂಲ ಕ್ರೋಡೀಕರಣ ಅತ್ಯಗತ್ಯವಾಗಿದೆ.

ನಿಗಮ, ಮಂಡಳಿಗಳ ಆಸ್ತಿಗಳ ಮೌಲ್ಯ ಮಾಪನ, ಶ್ರೇಣೀಕರಣಕ್ಕೆ ಸೂಚನೆ ನೀಡಿ 3 ತಿಂಗಳ ಗಡುವು ನೀಡಲಾಗಿದೆ. ವರದಿ ಬಂದ ನಂತರ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

| ಬಿ.ಎಚ್. ಅನಿಲ್​ಕುಮಾರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಾರ್ವಜನಿಕ ಉದ್ದಿಮೆ ಇಲಾಖೆ

ಎಷ್ಟು ನಿಗಮಗಳಿವೆ?: ರಾಜ್ಯ ಸರ್ಕಾರದಲ್ಲಿ 84 ನಿಗಮಗಳಿದ್ದವು. ಇದೀಗ ಮತ್ತಷ್ಟು ಜಾತಿಗೊಂದು ನಿಗಮ ರಚಿಸಲಾಗಿದೆ. ಜಾತಿ, ವರ್ಗ ಆಧಾರಿತ ನಿಗಮಗಳನ್ನು ಸೇವಾ ವಲಯದ ನಿಗಮ ಮತ್ತು ಮಂಡಳಿಗಳೆಂದು ವರ್ಗೀಕರಿಸಲಾಗಿದೆ. ಅಲ್ಲಿ ಯಾವುದೇ ರೀತಿಯ ಆಸ್ತಿ ನಗದೀಕರಣಕ್ಕೆ ಅವಕಾಶ ಇಲ್ಲ. ಉಳಿದ 79 ನಿಗಮ ಮತ್ತು ಮಂಡಳಿಗಳಲ್ಲಿ 60 ಲಾಭದಲ್ಲಿದ್ದರೆ, ಉಳಿದ 19 ತೀವ್ರ ನಷ್ಟದಲ್ಲಿವೆ. ಲಾಭ, ನಷ್ಟದಲ್ಲಿರುವ ನಿಗಮ ಮತ್ತು ಮಂಡಳಿಗಳಲ್ಲಿರುವ ಆಸ್ತಿ ನಗದೀಕರಣಕ್ಕೆ ಮುಂದಾಗಿದೆ.

ಲಾಭದ ಉದ್ದಿಮೆ ಮೇಲೆ ಕಣ್ಣು: ನಷ್ಟದಲ್ಲಿರುವ ಉದ್ದಿಮೆಗಳ ಮೇಲೆ ಯಾವುದೇ ಖಾಸಗಿ ಹೂಡಿಕೆದಾರರು ಆಸಕ್ತಿ ತೋರಿಸುವುದಿಲ್ಲ. ಸರ್ಕಾರದ ಈ ನಿರ್ಧಾರದಿಂದ ಅನುಕೂಲ ಹಾಗೂ ಅನಾನುಕೂಲ ಎರಡೂ ಇವೆ.

ತೆರಿಗೆಯೇತರ ಆದಾಯ: ತೆರಿಗೆ ಸಂಗ್ರಹಣೆ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ಸರ್ಕಾರದ ಮುಂದಿರುವುದು ಈಗ ತೆರಿಗೆಯೇತರ ಆದಾಯ ಸಂಗ್ರಹ. ಅದೇ ಉದ್ದೇಶದಿಂದಲೇ ಈ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಒತ್ತುವರಿಯಾಗಿದ್ದ ಭೂಮಿಯನ್ನು ತೆರವು ಮಾಡಲಾಗುತ್ತಿದೆ. ಈಗಾಗಲೇ 2.7 ಲಕ್ಷ ಎಕರೆ ತೆರವಾಗಿದೆ. ಬೆಂಗಳೂರಿನಲ್ಲಿಯೇ 1614 ಎಕರೆ ಹರಾಜು ಹಾಕಲು ಸರ್ಕಾರ ಸಿದ್ಧವಿದೆ. ಪ್ರತಿ ಎಕರೆಗೆ 30 ಕೋಟಿ ರೂ.ಗಳಂತೆ ಲೆಕ್ಕ ಹಾಕಿದರೂ 48 ಸಾವಿರ ಕೋಟಿ ರೂ. ಸಂಗ್ರಹಿಸಲು ಅವಕಾಶವಿದೆ.

ಮೌಲ್ಯಮಾಪನಕ್ಕೆ ಸೂಚನೆ: ಕರ್ನಾಟಕ ಸಾಬೂನು ಕಾರ್ಖಾನೆಗೆ 25 ಎಕರೆ ಭೂಮಿ ಇದೆ. ದಾಖಲೆಗಳಲ್ಲಿ ಎಕರೆಗೆ 50 ರಿಂದ 60 ಸಾವಿರ ರೂ.ಗಳೆಂದು ವಿವರವಿದೆ. ಆದರೆ ಈಗಿನ ಮಾರುಕಟ್ಟೆಯ ಬೆಲೆ ಕೋಟ್ಯಂತರ ರೂ.ಗಳಾಗುತ್ತದೆ. ಇದು ಒಂದು ಉದಾಹರಣೆ ಮಾತ್ರ. ಉಳಿದ ನಿಗಮಗಳ ಕತೆಯೂ ಇದೇ ಆಗಿದೆ.

ಆಸ್ತಿ ನಗದೀಕರಣ ಎಂದರೆ ಜನರ ಮೇಲೆ ಹೊರೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಿಂತು ಹೋಗಿರುವ ಉದ್ದಿಮೆಗಳಿಗೂ ವಿನಾಯಿತಿ ನೀಡಬಾರದು. ಖಾಸಗಿ ಮಾಫಿಯಾ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಇದರಿಂದ ಬರುವ ಆದಾಯವನ್ನು ಜನರ ಹಿತಕ್ಕೆ ಬಳಸಬೇಕು.

| ಡಾ. ಆರ್.ಎಚ್. ಪವಿತ್ರಾ ಅರ್ಥಶಾಸ್ತ್ರಜ್ಞರು

ಏನಿದು ನಗದೀಕರಣ?: ಸಾರ್ವಜನಿಕ ಹಣದಲ್ಲಿ ಯಾವುದೇ ಆಸ್ತಿ ನಿರ್ಮಾಣ ಮಾಡಿ, ನಂತರ ನಿರ್ವಹಣೆ ಮಾಡಿ ಹೆಚ್ಚಿನ ಲಾಭಕ್ಕಾಗಿ ಖಾಸಗೀಕರಣ ಮಾಡುವುದೇ ಆಸ್ತಿಗಳ ನಗದೀಕರಣ. ಎರಡು ದಶಕಗಳ ಹಿಂದೆಯೇ ಆರಂಭಗೊಂಡ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮುಂದುವರಿದ ಭಾಗ ಇದು.

ಎಷ್ಟಿದೆ ಬಂಡವಾಳ?: ಸರ್ಕಾರದ ನಿಗಮಗಳಲ್ಲಿ ಸುಮಾರು 48 ಸಾವಿರ ಕೋಟಿ ರೂ. ಬಂಡವಾಳವಿದೆ. 1.92 ಲಕ್ಷ ಉದ್ಯೋಗಿಗಳಿದ್ದಾರೆ. ಕೆಲವು ನಿಗಮ,ಮಂಡಳಿಗಳಿಂದ ಸುಮಾರು 5 ಸಾವಿರ ಕೋಟಿ ರೂ. ಸಾಲವೂ ಇದೆ.

2022-23ಕ್ಕೆ ಸರ್ಕಾರದ ಬದ್ಧವೆಚ್ಚ

(ಕೋಟಿ ರೂ.ಗಳಲ್ಲಿ )

  • ವೇತನ 43146
  • ನಿವೃತ್ತಿ ವೇತನ 25520
  • ಸಹಾಯಧನ 22098

ಯಾವ್ಯಾವ ಆಸ್ತಿ?: ವಿದ್ಯುತ್ ಮಾರ್ಗ, ರಾಜ್ಯದ ರಸ್ತೆಗಳು, ರಸ್ತೆಗಳಲ್ಲಿ ವಿಧಿಸ ಬಹುದಾದ ಟೋಲ್, ಸರ್ಕಾರದ ಕೈಗಾರಿಕೆಗಳು, ಖನಿಜಗಳು, ಉಗ್ರಾಣಗಳು, ಟ್ರಕ್ ಟರ್ವಿುನಲ್​ಗಳು ಹೀಗೆ ವಿವಿಧ ರೀತಿಯ ಆಸ್ತಿಯನ್ನು ನಗದೀಕರಣ ಮಾಡುವುದಕ್ಕೆ ಅವಕಾಶವಿದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಅನುಕೂಲಗಳು

  • ಸರ್ಕಾರದ ಬೊಕ್ಕಸಕ್ಕೆ ಆದಾಯ
  • ಉದ್ಯೋಗಗಳ ಸೃಷ್ಟಿ ಸಾಧ್ಯತೆ
  • ಅರ್ಥ ವ್ಯವಸ್ಥೆ ಚೇತರಿಕೆಗೆ ಅನುಕೂಲ
  • ಸರ್ಕಾರಕ್ಕೆ ಹೊರೆ ಕಡಿಮೆ

ಅನನುಕೂಲಗಳು

  • ಸರ್ಕಾರದ ಸೇವೆಗಳು ದುಬಾರಿ
  • ಭೂಮಿ ಉಳಿಯದಿರುವ ಅಪಾಯ
  • ಮಾಫಿಯಾಗಳ ಕೈಗೆ ಸರ್ಕಾರದ ಆಸ್ತಿ ಸಾಧ್ಯತೆ, ಬೆಲೆ ಹೆಚ್ಚಳದ ನಿರೀಕ್ಷೆ

ಸರ್ಕಾರ ಮಾಡಬೇಕಾದ್ದು?

  • ಭೂಮಿಯ ಹಕ್ಕು ಉಳಿಸಿಕೊಳ್ಳಬೇಕು
  • ದರ ಹೆಚ್ಚಾಗದಂತೆ ನೋಡಿಕೊಳ್ಳಬೇಕು
  • ಉದ್ಯೋಗ ಅವಕಾಶ ಸ್ಥಳೀಯರಿಗೆ ಸಿಗಬೇಕು
  • ವಿನಾಯಿತಿ, ರಿಯಾಯಿತಿಗಳಿಗೆ ಕಡಿವಾಣ

ಹೇಗಿರಲಿದೆ ಪ್ರಕ್ರಿಯೆ?: ಸರ್ಕಾರದ ಆಸ್ತಿ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕಿದ ನಂತರ ವರದಿಯನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸರ್ಕಾರಕ್ಕೆ ಸಲ್ಲಿಸಲಿದೆ. ಆ ನಂತರ ಸರ್ಕಾರ ಖಾಸಗೀಕರಣ, ಬಂಡವಾಳ ಹಿಂದೆಗೆತ, ಹೊಸ ಹೂಡಿಕೆದಾರರಿಗೆ ಆಹ್ವಾನದಂತಹ ನಿರ್ಧಾರವನ್ನು ಕೈಗೊಳ್ಳಲಿದೆ.

Government Asset Cashing