ನ್ಯೂಸ್

ಭೂ ವಂಚನೆಗೆ ಬ್ರೇಕ್: ಖರೀದಿ ವೇಳೆ ಮೋಸ ತಪ್ಪಿಸಲು ಸರ್ಕಾರದಿಂದಲೇ ಏಜೆನ್ಸಿ ಸ್ಥಾಪನೆ..

ಬೆಂಗಳೂರು: ಒಂದೇ ನಿವೇಶನ, ಭೂಮಿಯನ್ನು ಒಬ್ಬರಿಗಿಂತ ಹೆಚ್ಚು ಜನರಿಗೆ ಮಾರಾಟ ಮಾಡುವುದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಕಾನೂನುಬದ್ಧವಾಗಿಯೇ ದಾಖಲೆಗಳನ್ನು ಪರಿಶೀಲನೆ ಮಾಡಿಕೊಡುವ ಏಜೆನ್ಸಿಯೊಂದರ ವ್ಯವಸ್ಥೆ ಮಾಡಲಾಗುತ್ತಿದೆ.

ಸೈಟ್, ಭೂಮಿ ಕೊಳ್ಳುವವರು ಮೋಸದ ಜಾಲಕ್ಕೆ ಸಿಲುಕುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದೆ. ಬಹಳಷ್ಟು ಪ್ರಕರಣಗಳಲ್ಲಿ ಬಡವರೇ ಮೋಸಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ, ಅಂತಹವರನ್ನು ರಕ್ಷಿಸಲು ಸರ್ಕಾರವೇ ಸಂಸ್ಥೆಯೊಂದನ್ನು ಸ್ಥಾಪಿಸಲಿದೆ.

ಕಂದಾಯ ಸಚಿವ ಆರ್. ಅಶೋಕ್ ಈ ವಿಷಯ ಪ್ರಕಟಿಸಿದ್ದು, ರಾಜ್ಯಾದ್ಯಂತ ಒಂದೇ ಏಜೆನ್ಸಿ ಇರಬೇಕೆ ಅಥವಾ ಜಿಲ್ಲೆಗೊಂದರಂತೆ ಸ್ಥಾಪಿಸಬೇಕೆ ಎಂಬ ಬಗ್ಗೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಬಹುತೇಕ ಪೊಲೀಸ್ ಠಾಣೆ ಗಳಲ್ಲಿ ಭೂಮಿ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿವೆ. ಭೂಮಿಯ ಬೆಲೆ ಹೆಚ್ಚಾಗಿರುವ ಕಡೆಗಳಲ್ಲಿ ವಂಚನೆಗಳು ಹೆಚ್ಚುತ್ತಿವೆ. ವಂಚಕರ ದೊಡ್ಡ ಜಾಲವೇ ಇದೆ. ಅಲ್ಲದೆ, ಭೂಮಿ ಖರೀದಿ ಮಾಡುವವರು ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ಉದಾಸೀನ ತೋರುತ್ತಾರೆ ಎಂದು ಅಶೋಕ್ ಹೇಳಿದರು.

ಇದನ್ನೆಲ್ಲ ನಿಯಂತ್ರಣ ಮಾಡದಿದ್ದರೆ ದೂರುಗಳು ಹೆಚ್ಚಾಗುತ್ತವೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ವಂಚನೆಗೆ ಬಲಿಯಾದವರು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ, ಅದನ್ನು ತಪ್ಪಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಅಶೋಕ್ ವಿವರಿಸಿದರು.

ಸರ್ಕಾರ ಸ್ಥಾಪಿಸುವ ಏಜೆನ್ಸಿಗಳು ಮಾರಾಟ ಮಾಡುವವರು ಮತ್ತು ಕೊಳ್ಳುವವರ ಬಳಿ ದಾಖಲೆಗಳನ್ನು ಪಡೆದು ಅದರ ಅಸಲಿಯತ್ತನ್ನು ಪರೀಕ್ಷಿಸಿ ಸಂಬಂಧಪಟ್ಟ ಕಚೇರಿಗಳಿಂದ ಅಧಿಕೃತ ದಾಖಲೆಗಳನ್ನು ಗಮನಿಸಿ ಒಡೆತನದ ಬಗ್ಗೆ ಸ್ಪಷ್ಟತೆ ನೀಡುತ್ತವೆ. ಖರೀದಿದಾರರಿಗೆ ಯಾವುದೇ ಮೋಸ ಆಗುವುದಿಲ್ಲವೆಂಬ ಖಾತರಿಯನ್ನು ನೀಡಲಿವೆ. ಹೀಗಾಗಿ ಯಾವುದೇ ಆತಂಕವಿಲ್ಲದೇ ಖರೀದಿಸಬಹುದು ಎಂದು ಹೇಳಿದರು. ಮಾರಾಟಗಾರರು, ಖರೀದಿದಾರರು ದಾಖಲೆ ಪತ್ರಗಳಿಗಾಗಿ ಕಚೇರಿ, ಬ್ಯಾಂಕು ಅಲೆಯುವುದನ್ನು ಏಜೆನ್ಸಿಗಳು ತಪ್ಪಿಸುವುದರಿಂದ ಮೋಸದ ಜಾಲಕ್ಕೆ ಬ್ರೇಕ್ ಬೀಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮ ವಾಸ್ತವ್ಯದಲ್ಲಿ ಚಿಗುರಿದ ಯೋಜನೆ: ಕಲಬುರಗಿ ಜಿಲ್ಲೆಯಲ್ಲಿ ಮಾಡಿದ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಇಂಥ ಏಜೆನ್ಸಿ ಸ್ಥಾಪನೆ ಮಾಡುವ ಯೋಜನೆ ಮೊಳಕೆಯೊಡೆಯಿತು ಎಂದು ಸಚಿವ ಅಶೋಕ್ ತಿಳಿಸಿದರು. ಯಾರದೋ ಭೂಮಿಯ ಪಹಣಿಯಲ್ಲಿ ಇನ್ಯಾರದೋ ಹೆಸರು ಸೇರುವುದು, ಒಂದೇ ನಿವೇಶನ ಹಲವರ ಹೆಸರಲ್ಲಿ ನೋಂದಣಿಯಾಗುವುದು ಸೇರಿದಂತೆ ಹಲವು ಬಗೆಯ ಮೋಸದ ಬಗ್ಗೆ ಅಲ್ಲಿ ದೂರುಗಳು ಕೇಳಿ ಬಂದವು ಎಂದು ಹೇಳಿದರು.

ವಂಚನೆ ಹೇಗೆ?

  • ಖಾಲಿ ನಿವೇಶನಗಳಿದ್ದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತದೆ
  • ಅನೇಕ ಹೌಸಿಂಗ್ ಸೊಸೈಟಿಗಳಲ್ಲಿ ಒಂದೇ ನಿವೇಶನವನ್ನು ನಾಲ್ಕೈದು ಜನರಿಗೆ ಮಾರಾಟ ಮಾಡಿರುವ ಉದಾಹರಣೆಗಳಿವೆ
  • ತಮ್ಮದಲ್ಲದ ನಿವೇಶನಗಳ ಮಾರಾಟ
  • ಸೊಸೈಟಿಗಳ ನಿವೇಶನ ಕಾನೂನುಬದ್ಧವಾಗಿಲ್ಲದಿರುವುದು
  • ಸಿಎ ನಿವೇಶನಗಳ ಮಾರಾಟ
  • ನಿವೇಶನಗಳಿಗೆ ಭೂಮಿ ಖರೀದಿಯಲ್ಲಿಯೂ ಮೋಸ ಮಾಡುವುದು
  • ಒಂದೇ ಪ್ರಾಜೆಕ್ಟ್ ಹೆಸರಿನಲ್ಲಿ ಮೋಸ ಮಾಡುವುದು
  • ಜಮೀನನ್ನು ವರ್ಗಾವಣೆ ಮಾಡಿಸಿಕೊಳ್ಳುವಾಗ ವಾರಸುದಾರರನ್ನು ವಂಚಿಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಪ್ರಕರಣಗಳು
ಭೂಮಿ ಮತ್ತು ನಿವೇಶನ ಖರೀದಿದಾರರಿಗೆ ಮೋಸ ಮಾಡುವುದು ದೊಡ್ಡ ದಂಧೆಯೇ ಆಗಿದೆ. ಇದರ ಹಿಂದೆ ಸೊಸೈಟಿಗಳು, ಅಧಿಕಾರಿಗಳು, ಕೆಲ ಏಜೆಂಟರನ್ನು ಒಳಗೊಂಡ ಜಾಲವೇ ಇದೆ. ಅದಕ್ಕೆಲ್ಲ ಬ್ರೇಕ್ ಹಾಕುವ ಮೂಲಕ ಖರೀದಿದಾರರ ನೆರವಿಗೆ ಧಾವಿಸುವುದು ಸರ್ಕಾರದ ಉದ್ದೇಶವಾಗಿದೆ. | ಆರ್. ಅಶೋಕ್ ಕಂದಾಯ ಸಚಿವ

ಅನುಕೂಲಗಳು ಏನೇನು?

  • ಭೂಮಿ, ನಿವೇಶನ ಖರೀದಿಸುವವರು ಮೋಸದ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳುವುದು
  • ಖರೀದಿದಾರರು ಹಣ ಕಳೆದುಕೊಳ್ಳುವುದು ತಪ್ಪುತ್ತದೆ.
  • ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರಮೇಯವಿರುವುದಿಲ್ಲ
  • ಯಾವುದೇ ಭೂಮಿ, ನಿವೇಶನಗಳ ನಿಜವಾದ ವಾರಸುದಾರರ ಪತ್ತೆ ಸಾಧ್ಯ

ಕಾರ್ಯ ನಿರ್ವಹಣೆ

  • ಏಜೆನ್ಸಿಯು ಭೂಮಿ, ನಿವೇಶನ ಮಾರುವವರು ಮತ್ತು ಕೊಳ್ಳುವವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುವ ಮೂಲಕ ವಂಚನೆಯ ಜಾಲಕ್ಕೆ ಬ್ರೇಕ್ ಹಾಕಲಿದೆ
  • ಏಜೆನ್ಸಿಯು ದಾಖಲೆಗಳನ್ನು ಕಾನೂನುಬದ್ಧವಾಗಿ ಪರಿಶೀಲನೆ ಮಾಡಲಿದೆ
  • ಬಡಾವಣೆ ನಿರ್ಮಾಣ ಕ್ರಮಬದ್ಧವೇ ಎಂಬುದನ್ನು ಸಹ ಸಮಗ್ರವಾಗಿ ಪರಿಶೀಲನೆ ನಡೆಸಿಕೊಡಲಿದೆ
  • ದಾಖಲೆ ಪರಿಶೀಲನೆಗೆ ಸಣ್ಣ ಪ್ರಮಾಣದ ಶುಲ್ಕ ಪಡೆಯಲಿದೆ