ಮುಂಬೈ: ಬಾಲಿವುಡ್ ಹಿರಿಯ ನಟ, 'ಶೋಲೆ' ಖ್ಯಾತಿಯ ಗೋವರ್ಧನ್ ಅಸ್ರಾನಿ (84) ನಿನ್ನೆ (ಅ.20) ಮಧ್ಯಾಹ್ನ 3 ಗಂಟೆಗೆ ವಿಧಿವಶರಾದರು. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಿನ್ನೆ ರಾತ್ರಿ 8 ಗಂಟೆಗೆ ಶಾಸ್ತ್ರಿ ನಗರದ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು ಎಂದು ಕುಟುಂಬದ ಮೂಲಗಳು ಮಾಹಿತಿ ಹಂಚಿಕೊಂಡಿವೆ (Govardhan Asrani).
ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಅಸ್ರಾನಿ ಐದು ದಶಕಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರೋದ್ಯಮವನ್ನು ಆಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅವರು, 1970ರ ದಶಕದ ಆರಂಭದಲ್ಲಿ 'ಮೇರೆ ಅಪ್ನೆ' ಚಿತ್ರದ ಮೂಲಕ ಹಾಸ್ಯನಟನಾಗಿ ಸಿನಿಪ್ರಿಯರಿಗೆ ಪರಿಚಯವಾದರು. ತಮ್ಮ ಕೊನೆ ಉಸಿರಿಗೂ ಕೆಲವು ಗಂಟೆಗಳ ಮೊದಲು ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದ ಅಸ್ರಾನಿ, ಇನ್ನಿಲ್ಲ ಎಂಬ ಸುದ್ದಿ ಬಾಲಿವುಡ್ ಚಿತ್ರರಂಗ, ಅಭಿಮಾನಿಗಳು ಮತ್ತು ರಾಜಕೀಯ ಗಣ್ಯರು ಕಂಬನಿ ಮಿಡಿಯುವಂತೆ ಮಾಡಿತು.
1975ರ 'ಶೋಲೆ' ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಅವರ 'ದಿ ಗ್ರೇಟ್ ಡಿಕ್ಟೇಟರ್' ಪಾತ್ರವನ್ನು ಅನುಕರಿಸುವ ಮೂಲಕ ಆಸ್ರಾನಿ ತಮ್ಮ 'ಜೈಲರ್' ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಭಾರತೀಯ ಚಿತ್ರರಸಿಕರ ಮನದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಅವರು, ಅಭಿಮಾನಿಗಳು ಇಂದಿಗೂ 'ಹಮ್ ಅಂಗ್ರೆಜಾನ್ ಕೆ ಜಮಾನೆ ಕೆ ಜೈಲರ್ ಹೈ' ಡೈಲಾಗ್ ಅನ್ನು ಮರೆಯದಂತೆ ಉಳಿಸಿ ಹೋಗಿದ್ದಾರೆ.
ಇದನ್ನೂ ಓದಿ: ಪಾರ್ಟ್ ಟೈಂ ಬೌಲರ್ಗಳಿಂದ ಹೇಗೆ ಗೆಲ್ತೀರಾ? ಗಿಲ್ ನಾಯಕತ್ವ ವಿರುದ್ಧ ದಿಗ್ಗಜ ಆಟಗಾರನ ಆಕ್ರೋಶ! IND vs AUS
ಆಗಸ್ಟ್‌ನಲ್ಲಿ 'ಶೋಲೆ' ಚಿತ್ರವು 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ್ದ ಆಸ್ರಾನಿ, "ನಾನು ಯಾವುದೇ ಸಮಾರಂಭಕ್ಕೆ ಹೋದಾಗಲೆಲ್ಲಾ, 'ಜೈಲರ್' ಸಂಭಾಷಣೆಯನ್ನು ಹೇಳಲು ನನ್ನನ್ನು ಅಭಿಮಾನಿಗಳು ಒತ್ತಾಯಿಸುತ್ತಾರೆ. ಸಿಪ್ಪಿ ಸಾಬ್ ಅವರ ನಿರ್ದೇಶನ ಮತ್ತು ಸಲೀಂ ಜಾವೇದ್ ಅವರ ಬರವಣಿಗೆಯಿಂದಾಗಿ ಮಾತ್ರ ಇದೆಲ್ಲವೂ ಸಾಧ್ಯವಾಯಿತು" ಎಂದು ಹೇಳಿದರು.
1970 ಮತ್ತು 1980ರ ದಶಕಗಳಲ್ಲಿ ಆಸ್ರಾನಿ ಅವರು ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಹಾಸ್ಯನಟರಾಗಿ ಗುರುತಿಸಿಕೊಂಡರು. ಹೃಷಿಕೇಶ್ ಮುಖರ್ಜಿ, ಬಸು ಚಟರ್ಜಿ, ಬಿ.ಆರ್. ಚೋಪ್ರಾ ಮತ್ತು ಕೆ.ಆರ್. ರಾವ್ ಅವರಂತಹ ಸ್ಟಾರ್ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಆಸ್ರಾನಿ ಅವರಿಗೊಂದು ಪಾತ್ರವನ್ನು ನೀಡುತ್ತಿದ್ದರು. ಇದು ಅವರನ್ನು ಚಿತ್ರ ಪ್ರೇಮಿಗಳಿಗೆ ಇನ್ನಷ್ಟು ಹತ್ತಿರವಾಗಿಸಿತು. 'ಶೋಲೆ', 'ಅಭಿಮಾನ್', 'ಆಜ್ ಕಿ ತಾಜಾ ಖಬರ್' ಮತ್ತು 'ಬಾಲಿಕಾ ಬಾಧು' ಚಿತ್ರಗಳಲ್ಲಿನ ಅಸ್ರಾನಿ ಅವರ ನಟನೆಗೆ ಸಾಕಷ್ಟು ಜನಪ್ರಿಯತೆ ಲಭಿಸಿತು.
ಇಷ್ಟಲ್ಲದೆ, ದೂರದರ್ಶನದಲ್ಲೂ ಜನಪ್ರಿಯತೆ ಗಳಿಸಿದ ಅಸ್ರಾನಿ, 1985ರಲ್ಲಿ, ದೂರದರ್ಶನದಲ್ಲಿ ಪ್ರಸಾರವಾದ 'ನಾಟಖತ್ ನಾರದ' ಧಾರಾವಾಹಿಯಲ್ಲಿ ನಾರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಸ್ರಾನಿ ಭಾರತೀಯ ಚಿತ್ರರಂಗದಲ್ಲಿ ಅಪರೂಪದ ದಾಖಲೆಯನ್ನು ಹೊಂದಿದ್ದು, ಒಂದು ದಶಕದಲ್ಲಿ ಅತಿ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿದ ಹಾಸ್ಯನಟ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. 1970ರಲ್ಲಿ 101 ಚಿತ್ರಗಳಲ್ಲಿ ಮತ್ತು 1980ರ ದಶಕದಲ್ಲಿ 107 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟನಾಗಿ ಮಾತ್ರವಲ್ಲದೆ, ಬರಹಗಾರ ಮತ್ತು ನಿರ್ದೇಶಕನಾಗಿಯೂ ಅಸ್ರಾನಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ,(ಏಜೆನ್ಸೀಸ್).